ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ ಹೆಸರಿಗೆ ಮಸಿ ಬಳಿಯುವ ಯತ್ನವನ್ನು ಪಟ್ಟಭದ್ರ ಹಿತಾಸಕ್ತಿಗಳು ಸತತವಾಗಿ ಮಾಡುತ್ತಿವೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ಆಂತಕ ವ್ಯಕ್ತಪಡಿಸಿದರು.
ವಿಶ್ವವಿದ್ಯಾನಿಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಮಾದರಿಯಾದ ಪರೀಕ್ಷಾ ವಿಧಾನ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾಪನ ಡಿಜಿಟಲ್ ಮಾಡಿದ್ದು, ವಿದ್ಯಾರ್ಥಿ ಮಿತ್ರ ಎಂಬ ಆ್ಯಪ್ ಮೂಲಕ ಮೌಲ್ಯಮಾಪನವಾದ 30 ನಿಮಿಷಕ್ಕೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡುವ ಸೌಲಭ್ಯ ಕಲ್ಪಿಸಲಾಗಿದೆ. ಇಂತಹ ಮಾದರಿ ವ್ಯವಸ್ಥೆ ಜಾರಿಗೆ ತಂದಿರುವ ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ ಕೋರ್ಟ್ಗೆ ಹೋಗಲಾಗಿದೆ. ಇದಕ್ಕೆ ನನ್ನ ಧಿಕ್ಕಾರವಿರಲಿ ಎಂದರು.
ಜೈ ಭೀಮ್ ಕನ್ನಡ ಜಾಗೃತಿ ಮತ್ತು ಹಾಗೂ ಎಸ್ಸಿ/ಎಸ್ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಸಂಘದವರು ಕೋರ್ಟ್ನಲ್ಲಿ ವಿಶ್ವವಿದ್ಯಾನಿಲಯದ ಹಿಂದಿನ ಇಬ್ಬರು ವಿಶ್ರಾಂತ ಕುಲಪತಿಗಳು, ಕುಲಪತಿಗಳು ಸೇರಿದಂತೆ ಒಟ್ಟು 35 ಜನರ ಮೇಲೆ ದೂರು ದಾಖಲಿಸಿದ್ದಾರೆ. ಇದರಿಂದ ವಿಶ್ವವಿದ್ಯಾನಿಲಯದ ಯಾವುದೇ ಅಧ್ಯಾಪಕರು ಮತ್ತು ಸಿಬ್ಬಂದಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲಾಗುತ್ತಿಲ್ಲ.
ಜೈ ಭೀಮ್ ಕನ್ನಡ ಜಾಗೃತಿ ಮತ್ತು ಎಸ್ಸಿ/ಎಸ್ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಸಂಘ ಹೈಕೋರ್ಟ್ಗೆ ಹೋಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸುವ ಕುರಿತು ಲೀಗಲ್ ಆಗಿ ವಕೀಲರ ಜತೆ ಚರ್ಚೆ ನಡೆಸಲಾಗಿದೆ ಎಂದರು.