ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ 2019-20 ನೇ ಸಾಲಿನ ಎಲ್ಲ ಪರೀಕ್ಷೆಗಳನ್ನು ನಡೆಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕುಲಪತಿ ಪ್ರೋ. ವೀರಭದ್ರಯ್ಯ ತಿಳಿಸಿದರು.
ನಿನ್ನೆ ವಿ.ವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20 ನೇ ಸಾಲಿನಲ್ಲಿ ಕೋವಿಡ್ನಿಂದಾಗಿ ಪರೀಕ್ಷೆ ನಡೆಸದೆ ಪಾಸ್ ಮಾಡಲಾಗಿತ್ತು. ಆದರೆ, ಪರೀಕ್ಷೆ ನಡೆಸದೆ ಪಾಸ್ ಮಾಡಿದ್ದಕ್ಕೆ ಸಿಂಡಿಕೇಟ್ ಸಭೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಎದುರಾಗಬಹುದಾದ ಕಾನೂನು ತೂಡಗಿನ ಕುರಿತು ಸಲಹೆ ಪಡೆಯಲು ಕುಲಸಚಿವರಿಗೆ ಸೂಚನೆ ನೀಡಲಾಗಿದೆ ಎಂದರು.
ವಿವಿಯು ಸುಮಾರು 24 ಸಾವಿರ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಪಾಸ್ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ಸಿಂಡಿಕೇಟ್ ಸದಸ್ಯರೇ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ದೂರ ನೀಡಿದ್ದರು ಎಂದರು.
ವಿವಿಯ ಅತಿಥಿ ಉಪನ್ಯಾಸಕರ ಸಂಭಾವನೆ ಹೆಚ್ಚಳ: ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಮಾಸಿಕ ಸಂಭಾವನೆ ಹೆಚ್ಚಿಸಲಾಗಿದೆ. ಸಂಭಾವನೆ ಪರಿಷ್ಕರಿಸಲು ಕುಲಸಚಿವರ ಅಧ್ಯಕ್ಷತೆಯಲ್ಲಿ ಕುಲಸಚಿವ (ಪರೀಕ್ಷಾಂಗ), ಸಿಂಡಿಕೇಟ್ ಸದಸ್ಯರಾದ ಶ್ರೀ ಜಿ. ಧರ್ಮಪ್ರಸಾದ್, ಶ್ರೀ ಮಂಜುನಾಥ ಎನ್.ಆರ್ ಮತ್ತು ಹಣಕಾಸು ಅಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಲಾಗಿತ್ತು.
ಇದನ್ನೂ ಓದಿ: ಪಂಚರಾಜ್ಯಗಳ ಭವಿಷ್ಯ ನಿರ್ಧಾರ.. ಸಂಜೆ ವೇಳೆಗೆ ಪೂರ್ಣ ಫಲಿತಾಂಶ
ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಶೀಲನೆ ಮತ್ತು ನಿರ್ಣಯಕ್ಕಾಗಿ ನಿನ್ನೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಯಿತು. ಇದನ್ನು ಜಾರಿಗೆ ತರಬೇಕೆಂದು ಸಿಂಡಿಕೇಟ್ ಸದಸ್ಯರಾದ ಶ್ರೀ ಬಿ. ನಿರಂಜನಮೂರ್ತಿ, ಶ್ರೀ ಹೆಚ್.ಬಿ. ರಮೇಶ್ ಬಾಬು, ಶ್ರೀ ಬಳ್ಳೇಕೆರೆ ಸಂತೋಷ್, ಶ್ರೀ ಕಿರಣ್ ರವೀಂದ್ರ ದೇಸಾಯಿ, ಶ್ರೀ ರಾಮಲಿಂಗಪ್ಪ ಹೆಚ್. ಹಾಗೂ ಶ್ರೀ ಎಸ್ ಆರ್. ನಾಗರಾಜ್ ಇವರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸದರಿ ಸಭೆಯು ಕೆಲವೊಂದು ತಿದ್ದುಪಡಿಗಳೊಂದಿಗೆ ವರದಿ ಅಂಗೀಕರಿಸಿದ್ದು, ಅದರಂತೆ ಈ ಕೆಳಕಂಡಂತೆ ಎಂಟು ವಿವಿಧ ಹಂತಗಳಲ್ಲಿ ಸಂಭಾವನೆ/ವೇತನವನ್ನು ಪರಿಷ್ಕರಿಸಲಾಗಿದೆ.
- 15 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯು.ಜಿ.ಸಿ ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ - 45.000 ರೂ.
- 15 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ - 40,000 ರೂ.
- 10 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ 38,000 ರೂ.
- 10 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ 36,000ರೂ.
- 5 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ - 35,000 ರೂ.
- 5 ವರ್ಷ ಮತ್ತು ಹೆಚ್ಚು ವರ್ಷಗಳಿಗಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಹಾಗೂ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ. ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ - 33,000 ರೂ.
- 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ ನಿಯಮಾನುಸಾರ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ - ರೂ. 31,000.
- 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿರುವ ಮತ್ತು ಯು.ಜಿ.ಸಿ ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ - ರೂ. 30,000 ನಿಗದಿ ಮಾಡಿದೆ. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ಭತ್ಯೆಯನ್ನು ವೇತನ ಸಹಿತ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಕುಲಪತಿ ಪ್ರೋ. ವೀರಭದ್ರಯ್ಯ ತಿಳಿಸಿದ್ದಾರೆ.
ಇದೇ ವೇಳೆ ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗದ ಸಿ ತರಗತಿಯ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಪಾಕಿಸ್ತಾನ್ ಧ್ವಜ ಪೋಸ್ಟ್ ಮಾಡಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು. ಅಲ್ಲದೇ, ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ತನಿಖಾ ಸಮಿತಿ ರಚನೆ ಮಾಡಿ ಅವರು ನೀಡುವ ವರದಿಯಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕುಲ ಸಚಿವರಾದ ಅನುರಾಧ ತಿಳಿಸಿದರು. ಈ ವೇಳೆ ಸಿಂಡಿಕೇಟ್ ಸದಸ್ಯರಾದ ಸಂತೋಷ್ ಬಳ್ಳೆಕೆರೆ, ರಾಮ್ ಪ್ರಸಾದ್, ರಮೇಶ್ ಬಾಬು ಹಾಜರಿದ್ದರು.