ಶಿವಮೊಗ್ಗ: ಕುವೆಂಪು ರವರ ಕವಿಮನೆ ಕುಪ್ಪಳ್ಳಿಯ ವಸ್ತು ಸಂಗ್ರಹಾಲಯದಲ್ಲಿದ್ದ ಕುವೆಂಪುರವರ ಪದ್ಮವಿಭೂಷಣ ಪದಕಗಳನ್ನು ಕದ್ದವರಿಗೆ ತೀರ್ಥಹಳ್ಳಿ ನ್ಯಾಯಾಲಯ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ ದಂಡವನ್ನು ವಿಧಿಸಿದೆ.
2015 ರಲ್ಲಿ ಕುಪ್ಪಳ್ಳಿಯ ಕವಿಮನೆಯಲ್ಲಿನ ವಸ್ತು ಸಂಗ್ರಹಾಲಯದಲ್ಲಿದ್ದ ಪದ್ಮವಿಭೂಷಣ ಪ್ರಶಸ್ತಿ ಪದಕ ಸೇರಿದಂತೆ ಹಲವು ಮಹತ್ವದ ವಸ್ತುಗಳ ಕಳ್ಳತನವಾಗಿತ್ತು. ಈ ಕುರಿತು ಕುವೆಂಪು ಪ್ರತಿಷ್ಠಾನದ ಮನುದೇವ್ ರವರು ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ ಪೊಲೀಸರು, ಮೊದಲನೇ ಆರೋಪಿ ರೇವಣ ಸಿದ್ದಪ್ಪ ಹಾಗೂ ಎರಡನೇ ಆರೋಪಿಯಾದ ಅಂಜನಪ್ಪ ಹಾಗೂ ಮೂರನೇ ಆರೋಪಿಯಾಗಿ ಪ್ರಕಾಶ್ ರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮೂವರು ತಾವೇ ಕಳ್ಳತನ ಮಾಡಿದ್ದು ಎಂದು ಒಪ್ಪಿಕೊಂಡಿದ್ದರು. ಆದ್ರೆ ವಿಚಾರಣೆ ನಡೆಯುವಾಗಲೇ ಒಂದನೇ ಆರೋಪಿ ರೇವಣ ಮೃತ ಪಟ್ಟಿದ್ದರು.
ಎರಡನೇ ಹಾಗೂ ಮೂರನೇ ಆರೋಪಿಗಳನ್ನು ವಿಚಾರಣೆ ನಡೆಸಿದ ಮೇಲೆ ತೀರ್ಥಹಳ್ಳಿಯ ಹಿರಿಯ ಜೆಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಗೀತಾಂಜಲಿರವರು ಆರೋಪಿಗಳ ವಿರುದ್ದ ಸಾಕ್ಷ್ಯಧಾರಗಳನ್ನು ಸೂಕ್ತವಾಗಿ ಪರಿಶೀಲಿಸಿ, ಆರೋಪಿಗಳಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿದ್ದು, ಒಂದು ವೇಳೆ ದಂಡ ಕಟ್ಟಲು ವಿಫಲರಾದ್ರೆ, ಮತ್ತೆ 6 ತಿಂಗಳು ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕರಾದ ಡಿ. ಬಿನು ರವರು ವಾದ ಮಂಡಿಸಿದ್ದರು.