ಶಿವಮೊಗ್ಗ: ಅಲ್ಲೆಲ್ಲೋ ಹೋಗಿ ಜನರ ಮಧ್ಯ ನಿಂತು ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಕಾಮಿಡಿ ವಿಡಿಯೋ ವೈರಲ್ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಟಕವಾಡುತ್ತಿದ್ದಾರೆ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಆರೋಪಿಸಿದರು.
ಲೋಕಸಭಾ ಚುನಾವಣಾ ಹಿನ್ನೆಲೆ ಸೊರಬ ಕ್ಷೇತ್ರದ ಕೊಟಿಪುರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ತಾವು ಸ್ಪರ್ಧಿಸುತ್ತಿದ್ದ ಕ್ಷೇತ್ರವನ್ನ ತಮ್ಮ ಮೊಮ್ಮಗನಿಗೆ ಬಿಟ್ಟು ಕೊಟ್ಟು ಮಹಾತ್ಯಾಗಿ ಅಂತ ಕರೆಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ಯಾಕೇಜ್ ಟೂರ್ ಮಾಡುವ ಮೂಲಕ ಫಾರಿನ್ ಹೋಗುವ ಇವರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಎಂದೂ ತಲೆ ಬಿಸಿ ಮಾಡಿಕೊಂಡವರಲ್ಲ. ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಬಂದು ನಾನು ನೀರಾವರಿ ಪ್ಯಾಕೇಜ್ ತಂದೆ, ಆ ಪ್ಯಾಕೇಜ್ ತಂದೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಹೊರತು ಐದು ವರ್ಷ ಶಾಸಕರಾದಾಗ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಯಡಿಯೂರಪ್ಪನವರ ನೇತೃತ್ವದದಲ್ಲಿ ಸಾಕಷ್ಟು ಯೋಜನೆಗಳನ್ನ ತಂದಿದ್ದೇವೆ. ಅವನ್ನು ಮಧು ಬಂಗಾರಪ್ಪ ತಂದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತವಾಗಿದೆ ಎಂದು ಸಹೋದರನ ವಿರುದ್ಧ ಕಿಡಿಕಾರಿದರು.