ಶಿವಮೊಗ್ಗ: ಮನೆಯಲ್ಲಿ ಹೆಣ್ಣಿದ್ದರೆ ಗಂಡು ಮಕ್ಕಳು ಹೆಣ್ಣನ್ನು ನೋಡಲು ಬರುತ್ತಾರೆ. ಯಾರಿಗೆ ಹೆಣ್ಣಿನ ಯೋಗ ಇರುತ್ತೋ ಅವರಿಗೆ ಮದುವೆ ಆಗುತ್ತೆ. ಹಾಗೆಯೇ ಸರ್ಕಾರದಲ್ಲಿ ಸಚಿವ ಸ್ಥಾನ ಇದ್ದಾಗ ಶಾಸಕರಿಗೆ ಮಂತ್ರಿ ಆಗುವ ಅಪೇಕ್ಷೆ ಇರುತ್ತದೆ. ಅದರಂತೆ ಯಾರಿಗೆ ಯೋಗ ಇರುತ್ತೋ ಅವರು ಮಂತ್ರಿ ಆಗುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿವಾರು ಅಥವಾ ಜಿಲ್ಲಾವಾರು ಪ್ರಾತಿನಿಧ್ಯ ಕೊಡುವ ಪರಿಸ್ಥಿತಿಯ ರೀತಿಯಲ್ಲಿ ಹೋದರೆ ಬಿಜೆಪಿ ಸರ್ಕಾರಕ್ಕೆ ಕಷ್ಟವಾಗುತ್ತೆ. ಹದಿನೈದು ಜನ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದಾಗ ಎಲ್ಲರಿಗೂ ಆಶ್ವಾಸನೆ ಕೊಡಲಾಗಿದೆ. ಈ ಹಿಂದೆ ಚುನಾವಣೆಯಲ್ಲಿ ಗೆದ್ದವರಿಗೆ ಆಶ್ವಾಸನೆಯಂತೆ ಸಚಿವ ಸ್ಥಾನ ನೀಡಲಾಗಿದೆ. ಸಂಪುಟದಲ್ಲಿ ಉಳಿದ ಸಚಿವ ಸ್ಥಾನಗಳನ್ನು ಯಾರಿಗೆ ಕೊಡಬೇಕು ಎನ್ನುವುದನ್ನು ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಈಗಾಗಲೇ ಹಲವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಯೋಗ ಇದ್ದವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮರಾಠ ಪ್ರಾಧಿಕಾರ ಅಂತಾ ಮಾಡಿಲ್ಲ. ಮರಾಠ ಪ್ರಾಧಿಕಾರ ಮಾಡಿದರೆ ಕಾನೂನು ರಚನೆ ಮಾಡಬೇಕು. ಹಾಗಾಗಿ ಮರಾಠ ಸಮುದಾಯ ನಿಗಮ ಎಂದು ಮಾಡಲಾಗಿದೆ. ಮರಾಠ ಸಮುದಾಯ ನಿಗಮಕ್ಕೂ ಮರಾಠಿ ಭಾಷೆಗೂ ಸಂಬಂಧವಿಲ್ಲ. ರಾಜ್ಯದಲ್ಲಿ ನೂರಾರು ವರ್ಷಗಳಿಂದ ವಾಸವಿರುವ ಮರಾಠ ಜನ, ಕನ್ನಡಿಗರಾಗಿ ಬದುಕುತ್ತಿರುವ ಮರಾಠ ಜನರ ಅಭಿವೃದ್ಧಿಗೆ ಪ್ರಾಧಿಕಾರ ಸ್ಥಾಪಿಸಲಾಗಿದೆ. ಇದನ್ನು ವಿರೋಧಿಸುವವರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು.