ಶಿವಮೊಗ್ಗ: ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲುತ್ತಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಅಸಲಿಗೆ ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ಗೆಲ್ಲದಂತೆ ಸಂಚು ಹೂಡುತ್ತಿದ್ದಾರೆ. ಚುನಾವಣೆ ದೂರ ಇರುವಾಗಲೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎಂದರು.
ಸಿದ್ದರಾಮಯ್ಯ ಅಲೆಮಾರಿಯಂತೆ ಕ್ಷೇತ್ರಗಳನ್ನು ಹುಡುಕುತ್ತಾ ಹೋಗುವುದು ಮತದಾರರಿಗೆ ಅವಮಾನ ಮಾಡಿದಂತೆ. ಇವತ್ತಿಗೂ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿಲ್ಲ. ಕೊನೆಗೊಮ್ಮೆ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ದಿನ ಬರಬಹುದು ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿಯಲ್ಲಿ ನಡೆಯುವ ಮಹದಾಯಿ ಸಮಾವೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೊಳಿಸುವುದೇ ಬಿಜೆಪಿಯ ಮುಖ್ಯ ಗುರಿ. ಕಾಂಗ್ರೆಸ್‌ನವರು ಯೋಜನೆಯನ್ನು ಯಾವಾಗಲೂ ಜಾರಿಗೆ ತರಲು ಪ್ರಯತ್ನಿಸಿಲ್ಲ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಹೆಚ್.ಕೆ.ಪಾಟೀಲ್ ಅವರು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಮ್ಮೊಂದಿಗಿದೆ ಎಂದು ಹೇಳಿದ್ದರು. ಆದರೆ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಅದರ ವಿರುದ್ಧ ಮಾತನಾಡಿ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡಲ್ಲ ಎಂದಿದ್ದರು. ಕಾಂಗ್ರೆಸ್ಸಿನ ಈ ದ್ವಂದ್ವ ನೀತಿಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 100 ಕೋಟಿ ರೂ ನೀಡಿದ್ದರು. ಅಂದಿನಿಂದಲೂ ಬಿಜೆಪಿ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ಜಾರಿ ವಿಚಾರದಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮಹಾರಾಷ್ಟ್ರ ಕರ್ನಾಟಕ, ಗೋವಾ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಲು ಹೇಳಿದ್ದೆವು. ಆಗಲೂ ಕಾಂಗ್ರೆಸ್ ಆ ಕೆಲಸ ಮಾಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ನಂದಿನಿ ಸಂಸ್ಥೆಯನ್ನು ಅಮುಲ್ ಸಂಸ್ಥೆಯ ಜೊತೆ ಸೇರ್ಪಡೆ ಮಾಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಇದನ್ನೇ ಹೇಳಿದ್ದಾರೆ. ಟೀಕಿಸುವುದಕ್ಕಾಗಿ ಏನೇನೋ ಹೇಳಬಾರದು, ಡಿಕೆಶಿಗೆ ಏನು ಮಾತನಾಡಬೇಕೆಂಬುದು ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಈಗಷ್ಟೇ ಮದುವೆಯಾಗಿದೆ, ಆಗಲೇ ಮಕ್ಕಳಾಗಿಲ್ಲ ಅಂದ್ರೆ ಹೇಗೆ ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ