ಶಿವಮೊಗ್ಗ : ಕಾಂಗ್ರೆಸ್ ಪಕ್ಷದಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಆದರೆ, ಬಿಜೆಪಿ ಹೇಳೋರು, ಕೇಳೋರು ಇರುವ ಪಕ್ಷ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್, ಸಿದ್ಷರಾಮಯ್ಯ ಹಾಗೂ ಜಮೀರ್ ಜ್ಞಾನ ಇಲ್ಲದ ಹಾಗೆ ಮಾತನಾಡುತ್ತಾರೆ. ಮೂರು ಜನ ಏನ್ ಮಾತನಾಡುತ್ತಾರೆ ಅಂತ ಆ ಪಕ್ಷದಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ.
ಜಮೀರ್ ಅಹ್ಮದ್ ಹೇಳ್ತಾರೆ, ಚಾಮರಾಜನಗರ ವಿಧಾನಸಭಾ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡುತ್ತೇನೆ. ಅವರೇ ಮುಂದಿನ ಸಿಎಂ ಅಂತ. ಇವರೇನು ಬಿಟ್ಟು ಕೊಡುವುದು?, ಕಾಂಗ್ರೆಸ್ ಪಕ್ಷದಲ್ಲಿ ಬಿ ಫಾರಂ ಕೊಡುವ ವ್ಯವಸ್ಥೆ ಇಲ್ಲವಾ? ಎಂದು ಪ್ರಶ್ನಿಸಿದರು.
ಜಮೀರ್ ಅಹ್ಮದ್ ಬಿ ಫಾರಂ ನೀಡುವುದು, ಸಿಎಂ ಅಂತ ಹೇಳುವುದನ್ನು ನೋಡಿ ಡಿ ಕೆ ಶಿವಕುಮಾರ್ ಅಸಹಾಯಕರಂತೆ ಸುಮ್ಮನೆ ಕುಳಿತು ಕೊಳ್ಳುತ್ತಾರೆ. ಅವರ ಪಕ್ಷದ ಹುಳುಕುಗಳನ್ನು ಹೇಳಿಕೊಳ್ಳಲು ಆಗದೆ, ಬಿಜೆಪಿ ಪಕ್ಷ ವ್ಯವಸ್ಥಿತವಾಗಿ ಕೆಲಸ ಮಾಡುವುದನ್ನು ನೋಡಲು ಆಗದೆ, ಪೊಲೀಸ್ ಇಲಾಖೆ ಹಾಗೂ ಬೇರೆ ಬೇರೆ ಇಲಾಖೆಗಳ ಮೇಲೆ ಗೊಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಡಿ ಕೆ ಶಿವಕುಮಾರ್ ಅವರೇ, ಜಮೀರ್ ಅಹ್ಮದ್ ಹೇಳಿದ್ದರಾಲ್ಲ, ಸಿದ್ದರಾಮಯ್ಯ ಮುಂದಿನ ಸಿಎಂ ಅಂತ, ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಎಂದು ಮೊದಲು ತಿಳಿಸಿ, ನಂತರ ನಾನು ಉತ್ತರ ನೀಡುತ್ತೇನೆ ಎಂದರು. ನಮ್ಮ ಪಕ್ಷದಲ್ಲಿ ಹೇಳುವವರು, ಕೇಳುವವರು ಇದ್ದಾರೆ. ಅದಕ್ಕಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕಳುಹಿಸಿ ಕೊಡುತ್ತಿದ್ದಾರೆ.
ಬುಧವಾರ ಎಲ್ಲಾ ಮಂತ್ರಿಗಳ ಜೊತೆ ಸಭೆ ಇದೆ. ಗುರುವಾರ ಶಾಸಕರುಗಳಿಗೆ ಅವಕಾಶ ನೀಡಿದ್ದಾರೆ. ನಂತರ 18ರಂದು ಕೋರ್ ಕಮಿಟಿಗೆ ಇರುತ್ತಾರೆ. ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಪಕ್ಷ. ಕೇಂದ್ರದವರು ಕಳುಹಿಸುತ್ತಾರೆ. ನಮ್ಮ ಅಭಿಪ್ರಾಯ ತಿಳಿಸಿ ಕೊಡುತ್ತೇವೆ. ಕಾಂಗ್ರೆಸ್ನಲ್ಲಿ ಈ ವ್ಯವಸ್ಥೆ ಇದೆಯೇ? ಎಂದು ಸಚಿವ ಈಶ್ವರಪ್ಪ ಪ್ರಶ್ನೆ ಮಾಡಿದರು.