ಶಿವಮೊಗ್ಗ: "ಯಾರು ಪ್ರಭು ಶ್ರೀರಾಮಚಂದ್ರನ ಭಕ್ತರಿದ್ದಾರೋ ಅವರಿಗೆ ಮಾತ್ರ ಆಹ್ವಾನ ಬಂದಿದೆ. ರಾಜಕಾರಣವನ್ನು ರಾಮಮಂದಿರ ದೃಷ್ಟಿಯಿಂದ ಯೋಚನೆ ಮಾಡುವಂತವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ" ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ಇಲ್ಲಿನ ಮಲ್ಲೇಶ್ವರ ನಗರದದಲ್ಲಿ ಅಯೋಧ್ಯೆಯ ರಾಮನ ಮಂದಿರ ಉದ್ಘಾಟನೆಯ ಅಂಗವಾಗಿ ಮಂತ್ರಾಕ್ಷತೆ ವಿತರಣೆ ಮಾಡಿ ಮಾತನಾಡಿದ ಅವರು, "ಯಾರು ಬಿಜೆಪಿ ರಾಮ ಅಂತ ಯೋಚನೆ ಮಾಡಿದ್ದಾರೋ, ಅಂತಹವರಿಗೆ ಕೇಂದ್ರದ ಸಮಿತಿ ಆಹ್ವಾನ ಕೊಟ್ಟಿಲ್ಲ. ನಿಜಕ್ಕೂ ಯಾರು ರಾಮಭಕ್ತರಿದ್ದಾರೆ. 496 ವರ್ಷಗಳಿಂದ ಅಲ್ಲಿ ರಾಮಮಂದಿರ ಆಗಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದಾರೋ ಅಂತಹವರಿಗೆ ಜನವರಿ 22ರಂದು ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯುತ್ತಿದ್ದೇವೆ" ಎಂದರು.
ನಾವು ರಾಮಭಕ್ತರೆ ಎಂಬ ಗೃಹ ಸಚಿವ ಪರಮೇಶ್ವರ್ ಅವರು ಹೇಳಿಕೆಗೆ ಪ್ರತಿಕ್ರಿಯಿಸಿ, "ಯಾರು ರಾಮ ಭಕ್ತರು ಇದ್ದಾರೋ, ಯಾರು ರಾಮನಿಗೆ ಪೂಜೆ ಮಾಡಲು ಬಯಸಿದ್ದಾರೋ ಅವರೆಲ್ಲಾರು ಬನ್ನಿ. ಅವರಿಗೆ ಬರಬೇಡಿ ಎಂದು ಯಾರು ಹೇಳಿಲ್ಲ. 496 ವರ್ಷದ ಹಿಂದೆ ಅಯೋಧ್ಯೆಯಲ್ಲಿ ಮೊಘಲರು ರಾಮಮಂದಿರ ಧ್ವಂಸ ಮಾಡಿ, ಮಸೀದಿ ಕಟ್ಟಿ ಅದಕ್ಕೆ ಬಾಬರ್ ಮಸೀದಿ ಎಂದು ಹೆಸರಿಟ್ಟುಕೊಂಡಿದ್ದರು. ನಮ್ಮೆಲ್ಲರ ಸೌಭಾಗ್ಯ ನಾವು ಬದುಕಿರುವಾಗಲೇ ಜ.22 ರಂದು ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದೆ" ಎಂದರು.
ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ: "ರಾಮ ಭಕ್ತರು ದೇಶಾದ್ಯಂತ ಪ್ರತಿ ಹಿಂದೂಗಳ ಮನೆಗೆ ಹೋಗಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ವಿತರಿಸುತ್ತಿದ್ದೇವೆ. ಜ.22ರಂದು ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ, ದೇವರಿಗೆ ಅರ್ಪಿಸಬೇಕು. ಅಂದು ಮನೆಯಲ್ಲಿ ಸಿಹಿ ಊಟವನ್ನು ಮಾಡಬೇಕು. ಸಂಜೆ ಐದು ದೀಪಗಳನ್ನು ಹಚ್ಚಬೇಕು ಎಂದು ಕೇಂದ್ರದ ನಾಯಕರು ಸೂಚನೆ ಕೊಟ್ಟಿದ್ದಾರೆ. ಅದರಂತೆ ನಾವು ದೀಪಾವಳಿ ರೀತಿಯಲ್ಲಿ ಆಚರಣೆ ಮಾಡುತ್ತೇವೆ" ಎಂದು ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ - ವಿಜಯೇಂದ್ರ