ಶಿವಮೊಗ್ಗ : ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಮ್ಮ ಪಕ್ಷದ ಡಾ. ಆರ್ ಎಂ ಮಂಜುನಾಥ್ ಗೌಡ ವಿರುದ್ಧ ಅಸಮಾಧಾನ ಹೊರಹಾಕಿ ಬಹಿರಂಗ ಪತ್ರ ಬರೆದಿದ್ದಾರೆ. ಡಾ.ಆರ್ ಎಂ ಮಂಜುನಾಥ ಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಮಂಜುನಾಥ ಗೌಡ ಶರಾವತಿ ಸಂತ್ರಸ್ತರ ಪರವಾಗಿ ನಾಳೆ 26 ರಿಂದ 28ರ ತನಕ ಹೊಸನಗರ ಭಾಗದಲ್ಲಿ ಪಾದಯಾತ್ರೆ ನಡೆಸಲು ಹೊರಟಿದ್ದಾರೆ. ಆದರೆ, ಈ ವೇಳೆ ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕಿಮ್ಮನೆ ಆರೋಪಿಸಿದ್ದಾರೆ.
ಪತ್ರದ ಸಾರಾಂಶ
ಮಂಜುನಾಥ ಗೌಡರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದ್ದು, ಪಕ್ಷದ ಸಿದ್ಧಾಂತದ ವಿರುದ್ಧ ನಡೆದು ಕೊಳ್ಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಸಿದ್ಧಾಂತ, ಹೋರಾಟದ ಬಗ್ಗೆ ಅರಿವಿಲ್ಲ. ಶರಾವತಿ ಸಂತ್ರಸ್ತರು ಸೇರಿದಂತೆ ಇನ್ನೂ ಅನೇಕ ವಿಚಾರಗಳ ಕುರಿತು ಮಾಜಿ ಸಚಿವರು, ಹಿರಿಯರು ಆದ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಅನೇಕ ಪಾದಯಾತ್ರೆ ನಡೆಸಿದ್ದೇವೆ. ಈಗ ಮಂಜುನಾಥ ಗೌಡರು ಪಾದಯಾತ್ರೆ ನಡೆಸಲು ಹೊರಟಿದ್ದಾರೆ.
ಪಾದಯಾತ್ರೆಯಲ್ಲಿ ಪಕ್ಷದ ಚಿಹ್ನೆ ಇರಲ್ಲ
ಪಾದಯಾತ್ರೆಯಲ್ಲಿ ಮಂಜುನಾಥ ಗೌಡರು ಪಕ್ಷದ ಚಿಹ್ನೆ ಸೇರಿದಂತೆ ಪಕ್ಷದ ನಾಯಕರುಗಳ ಫೋಟೋ ಬಳಸಲ್ಲ. ಅಲ್ಲದೆ ಪಕ್ಷದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲು ನಿರಾಕರಿಸದರೆ, ಅವರ ವಿರುದ್ಧ ಬ್ಲಾಕ್‌ಮೇಲ್ ಮಾಡುವ ಬೆದರಿಕೆ, ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ.
ಪಕ್ಷದಲ್ಲಿ ಗುಂಪುಗಾರಿಕೆ
ಮಂಜುನಾಥ ಗೌಡರು ಪಕ್ಷಕ್ಕೆ ಸೇರ್ಪಡೆಯಾದಾಗಿನಿಂದ ಪಕ್ಷದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ. ಪಕ್ಷದಲ್ಲಿ ಹತ್ತಾರು ವರ್ಷಗಳಿಂದ ದುಡಿದ ಪ್ರಾಮಾಣಿಕರನ್ನು ಕಡೆಗಣಿಸಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪಕ್ಷಕ್ಕೆ ಸೇರಿ 6 ತಿಂಗಳು ಸಹ ಆಗಿಲ್ಲ. ಆಗಲೇ ಪಕ್ಷದಲ್ಲಿ ಖಾಸಗಿಯಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರಿಂದ ಮಂಜುನಾಥ ಗೌಡರನ್ನು ಜಿಲ್ಲಾ ಹಾಗೂ ರಾಜ್ಯ ಕಾಂಗ್ರೆಸ್ನಿಂದ ಹೊರ ಹಾಕುವುದು ಅನಿವಾರ್ಯವಾಗಬಹುದು ಎಂದು ದೂರಿದ್ದಾರೆ.
ಮಂಜುನಾಥ ಗೌಡರು ಮುಂದಿನ ಚುನಾವಣೆಯ ಟಿಕೆಟ್ಗಾಗಿಯೇ ಈ ಗಿಮಿಕ್ ನಡೆಸುತ್ತಿದ್ದಾರೆ ಎಂದು ಪಕ್ಷದ ಸಣ್ಣ ಮಕ್ಕಳಿಗೂ ತಿಳಿದಿರುವ ವಿಷಯವಾಗಿದೆ. ಮಂಜುನಾಥ್ ಗೌಡರ ಬಳಿ ಹಣ, ಬಂಗಾರ,ಆಸ್ತಿ ಇದೆ ಎಂದು ಹೀಗೆ ಮಾಡುತ್ತಿರಬಹುದು. ಆದರೆ, ಸಹಕಾರಿ ಇಲಾಖೆಯು ನಿಮ್ಮ ಮೇಲೆ ಹೊರಡಿಸಿರುವ ಆರೋಪದಿಂದ ಹೊರ ಬನ್ನಿ, ಸರ್ಕಾರಕ್ಕೆ ಕಟ್ಟಬೇಕಾದ 122 ಕೋಟಿ ರೂ. ಕಟ್ಟಿ ಬನ್ನಿ. ನಂತರ ಪಕ್ಷ ನೀಡುವ ಜವಾಬ್ದಾರಿ ವಹಿಸಿಕೊಂಡು, ಪಕ್ಷಕ್ಕೆ ದುಡಿಯಿರಿ. ನಿಮ್ಮೂಂದಿಗೆ ಕುಳಿತು ಗಾಂಧೀಜಿ ಅವರ ಸ್ವರಾಜ್ ಬಗ್ಗೆ ಹೇಗೆ ತಿಳಿಸುವುದು ಎಂದು ಬಹಳ ಖಾರವಾಗಿ ಪತ್ರ ಬರೆದಿದ್ದಾರೆ.
ಓದಿ: ಪಿಡಿ ಖಾತೆಯಿಂದ ಕೋವಿಡ್‌ನಿಂದ ಮೃತಪಟ್ಟವರ ವಾರಸುದಾರರಿಗೆ ₹1 ಲಕ್ಷ ಪರಿಹಾರ ನೀಡಲು ಆದೇಶ