ಶಿವಮೊಗ್ಗ: ’’ನಾನು ನನ್ನ ಗೃಹ ಕಚೇರಿಯಲ್ಲಿದ್ದಾಗ, ಪಕ್ಷದ ಕಚೇರಿಗೆ ಬರಬೇಕೆಂದು ನನಗೆ ಫೋನ್ ಬಂದಿತು. ನಾನು ಪಕ್ಷದ ಕಚೇರಿಗೆ ಬಂದಾಗ ತನಿಖಾ ತಂಡದವರು ಬಂದು ಪಕ್ಷದ ಕಚೇರಿಯನ್ನು ಬಾಡಿಗೆ ಪಡೆದಿರುವ ಕುರಿತು ಮಾಹಿತಿ ಕೇಳಿದರು. ಕಟ್ಟಡವನ್ನು ಯಾವಾಗ ಹೇಗೆ ಬಾಡಿಗೆ ಪಡೆದುಕೊಂಡಿರಿ ಎಂಬುದನ್ನು ಕೇಳಿದರು. ನಾವು 10 ಲಕ್ಷಕ್ಕೆ ಆಸಿಮ್ ಅವರ ಬಳಿ 2015 ರಲ್ಲಿ 8 ವರ್ಷಕ್ಕೆ ಲೀಸ್ ಪಡೆದುಕೊಂಡಿದ್ದೇವೆ. ಪ್ರತಿ ತಿಂಗಳು 1 ಸಾವಿರ ರೂ ಬಾಡಿಗೆ ನೀಡಬೇಕೆಂದು ಕರಾರು ಆಗಿದೆ. ನಮ್ಮ ಅವಧಿ ಮುಗಿದ ಮೇಲೆ ನಮಗೆ ಠೇವಣಿ ಹಣ ವಾಪಸ್ ನೀಡಿದರೆ, ನಾವು ಕಟ್ಟಡ ಬಿಟ್ಟು ಕೂಡುವುದಾಗಿ ತಿಳಿಸಿರುವುದಾಗಿ ಹೇಳಿದ್ದೇವೆ’’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಹಿತಿ ನೀಡಿದ್ದಾರೆ.
ಅಸಿಮ್ ಕುಟುಂಬಕ್ಕೂ ನಮಗೂ ಮಾಲೀಕರು ಹಾಗೂ ಬಾಡಿಗೆದಾರರ ಸಂಬಂಧ ಬಿಟ್ಟರೆ, ಬೇರೆ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳಲ್ಲಿ ಪಕ್ಷದ ವಿಚಾರ ಹಾಗೂ ನನ್ನ ವಿಚಾರ ಬರುತ್ತಿದೆ. ಅದು ಬಿಜೆಪಿಯ ಕಪೋಲ ಕಲ್ಪಿತ ವದಂತಿ. ಅಸೀಮ್ಗೂ ಗೃಹ ಸಚಿವ ಆರಗ ಜ್ಞಾನೇಂದ್ರಗೂ ಏನ್ ಸಂಬಂಧವಿದೆ ಎಂದು ನನಗೆ ಗೂತ್ತಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಉಳಿದ ಮಾಹಿತಿ ಗೃಹ ಸಚಿವರ ಬಳಿ ಇದೆ. ತೀರ್ಥಹಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸುವವರು ಅವರೇ, ಅವರು ಸಹ ಹಿಂದಿನ ಕೇಸುಗಳಲ್ಲಿ ಇದ್ದಾರೆ. ನಮಗೂ ಅಸೀಮ್ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಮನೆ ಮೇಲೆ ದಾಳಿ ನಡೆದಿಲ್ಲ: ನಮ್ಮ ಮನೆ ಮೇಲೆ ಯಾವುದೇ ದಾಳಿ ನಡೆದಿಲ್ಲ. ನಮ್ಮ ಮನೆಗೆ ಬಂದರೆ 10 ಸಾವಿರ ರೂ ಹಣ ಸಹ ಸಿಗುವುದಿಲ್ಲ. ಇಡಿ ಅವರೇ ಏನಾದ್ರೂ ಕೊಟ್ಟು ಹೋಗಬೇಕಷ್ಟೆ. ನಮ್ಮ ಮನೆಯಲ್ಲಿ ಫ್ರಿಡ್ಜ್, ಸೂಫಾ ಬಿಟ್ಟರೆ ಬೇರೆ ಏನೂ ಸಿಗುವುದಿಲ್ಲ. ಈಗ ಚುನಾವಣೆ ಬಂದಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಏಕೆಂದರೆ ಬಿಜೆಪಿ ಅವರು ತಮ್ಮ ಮಾನಮರ್ಯಾದೆಯನ್ನು ಕಳೆದುಕೊಂಡಿದ್ದಾರೆ. ಅವರು ಆಡಳಿತದಲ್ಲಿ ಎಲ್ಲವನ್ನು ಕಳೆದು ಕೊಂಡಿದ್ದಾರೆ. ಜಾತಿ ಧರ್ಮದಲ್ಲಿ ಏನಾದರು ಮಾಡಲು ಆಗುತ್ತದಾ ಎಂದು ನೋಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ತೀರ್ಥಹಳ್ಳಿಯಲ್ಲಿ ಇಡಿ ದಾಳಿ: ಶಂಕಿತ ಉಗ್ರ ಶಾರೀಕ್ ಸೇರಿ ಮೂವರ ಮನೆಗಳಲ್ಲಿ ಮುಂದುವರೆದ ಶೋಧ ಕಾರ್ಯಾಚರಣೆ
ತೀರ್ಥಹಳ್ಳಿಯಲ್ಲಿ ಇಡಿ ಕಾರ್ಯಾಚರಣೆ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಇಂದು ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣನಾದ ಶಾರಿಕ್ ಮನೆ ಮೇಲೆ ದಾಳಿಯಾಗಿದೆ. ಈ ಭಯೋತ್ಪಾದನ ಕೃತ್ಯಕ್ಕಾಗಿ ಯಾವ ಮೂಲದಿಂದ ಹಣ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಶಾರಿಕ್ ಮನೆ ಅಲ್ಲದೇ ಶಿವಮೊಗ್ಗದಲ್ಲಿ ಇರುವ ಅವರ ಸಂಬಂಧಿಕರ ಮನೆ ಹಾಗೂ ಆಸ್ತಿಯ ಮೇಲೆ ದಾಳಿ ಆಗಿದೆ.
ಅಸೀಮ್ ಎಂಬುವವರ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ: ಶಾರಿಕ್ ಕುಟುಂಬಸ್ಥರ ಮನೆ ಮತ್ತು ಆಸ್ತಿ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯೂ ಇರುವುದು ತಿಳಿದು ಬಂದಿದೆ. ಈ ಸಂಬಂಧ ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ ಅವರ ಕಚೇರಿ ಮೇಲೆ ದಾಳಿಯಾಗಿದೆ. ದಾಳಿ ವೇಳೆ ಆಸ್ತಿಯ ಬಗ್ಗೆ ಕಿಮ್ಮನೆ ರತ್ನಾಕರ್ ಅವರಲ್ಲಿ ವಿವರ ಪಡೆಯಲಾಗಿದೆ. ಈ ಬಗ್ಗ ಕಿಮ್ಮನೆ ಅವರು ದಾಖಲೆ ಒದಗಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಟ್ರಾವೆಲ್ ಹಿಸ್ಟರಿ ಕಲೆಹಾಕುತ್ತಿರುವ ಪೊಲೀಸರು