ಶಿವಮೊಗ್ಗ: ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ಧ್ವಜ ಹಾರಿಸದ ಸಚಿವರ ವಿರುದ್ಧ ಕರವೇ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆ ನಗರದಲ್ಲಿ ನಡೆದಿದೆ.
ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡದ ಧ್ವಜ ಹಾರಿಸದೆ ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ರಾಜ್ಯ ಸರ್ಕಾರ ಕನ್ನಡವನ್ನು ಹಾಗೂ ಕನ್ನಡ ಧ್ವಜವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಎಲ್ಲಾ ಕಡೆ ರಾಷ್ಟ್ರಧ್ವಜದ ಜೊತೆಗೆ ಕನ್ನಡ ನಾಡಿನ ಹಳದಿ ಕೆಂಪು ಬಾವುಟ ಹಾರಿಸಲಾಗಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ರಾಜ್ಯಧ್ವಜ ಹಾರಿಸದೆ ಇರುವುದು ಖಂಡನೀಯ ಎಂದು ಕರವೇ ಕಾರ್ಯಕರ್ತರು ಸಚಿವ ಈಶ್ವರಪ್ಪನವರಿಗೆ ಡಿಎಆರ್ ಸಭಾಂಗಣದಲ್ಲಿ ಪ್ರಶ್ನಿಸಿದರು.
ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಕರವೇ ಕಾರ್ಯಕರ್ತರನ್ನು ತಡೆಯಲು ಯತ್ನಿಸಿದಾಗ ಆಕ್ರೋಶಗೊಂಡು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡ ಧ್ವಜ ಹಾರಿಸಬೇಕು ಎಂದು ಮನವಿ ಕೊಡಲು ಬಂದ ಕರವೇ ಕಾರ್ಯಕರ್ತರು ಕೊನೆಗೆ ಸಚಿವ ಈಶ್ವರಪ್ಪ ಹಾಗೂ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತಾ ಮುಂದೆ ಸಾಗಿದರು. ನಂತರ ಪೊಲೀಸರು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದು ಜೀಪ್ನಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕಳುಹಿಸಿದರು.