ಶಿವಮೊಗ್ಗ: ಕನ್ನಡ ಚಿತ್ರರಂಗದ ಸಹ ನಟಿ ಉಷಾ ಅಲಿಯಾಸ್ ಉಷಾ ರವಿಶಂಕರ್ ಅವರನ್ನು ವಂಚನೆ ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ. ನಟಿ ಉಷಾ ಅವರು ಸುಮಾರು 6.50 ಲಕ್ಷ ರೂನಷ್ಟು ಹಣ ಪಡೆದು ವಾಪಸ್ ಮಾಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಶರವಣನ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಖಾಸಗಿ ದೂರಿನ ಮೇರೆಗೆ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಉಷಾ ಅವರನ್ನು ಬಂಧಿಸಿದ್ದಾರೆ.
ಶರವಣನ್ ಎಂಬವವರು ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಟಿ ವಿರುದ್ಧ ಆರೋಪ ಮಾಡಿದ್ದಾರೆ. '2020 ರಲ್ಲಿ ಉಷಾ ಅವರ ಪರಿಚಯವಾಗಿ ಸ್ನೇಹಿತರಾಗಿದ್ದೆವು. ಬಳಿಕ ಮೊಬೈಲ್ನಲ್ಲಿ ಚಾಟ್ ಮಾಡುತ್ತಾ ಪ್ರೀತಿ ಚಿಗುರಿತ್ತು. ಬಳಿಕ ನನ್ನನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರು. ಈ ಮಧ್ಯೆ ಉಷಾ ಅವರು ನನಗೆ ಸಮಸ್ಯೆ ಇದೆ ಹಣ ಬೇಕೆಂದು ನನ್ನ ಬಳಿ ಕೇಳಿದ್ದರು. ಆಗ ತಮ್ಮ ಬಳಿ ಹಣ ಇಲ್ಲದೇ ಹೋದಾಗ ಬ್ಯಾಂಕ್ನಲ್ಲಿ ಸಾಲ ಮಾಡಿ, 5 ಲಕ್ಷ ರೂ ನೀಡಿದ್ದೆ. ಅಲ್ಲದೇ ನನ್ನ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಪಡೆದು ಉಷಾ ಅದರಲ್ಲೂ ಸಹ ಸುಮಾರು 1.50 ಲಕ್ಷ ರೂದಷ್ಟು ಹಣ ತೆಗೆದುಕೊಂಡಿರುತ್ತಾರೆ. ಇದಾದ ಬಳಿಕ ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಉಷಾ ನೀಡದೇ ಸತಾಯಿಸಿದ್ದಾರೆ' ಎಂದು ಶರವಣ್ ದೂರಿದ್ದಾರೆ.
ಕೆಲ ದಿನಗಳ ಬಳಿಕ ಉಷಾ ಅವರು ಚೆಕ್ ನೀಡಿದ್ದರು. ಆದರೆ ಆ ಚೆಕ್ ಸಹ ಬೌನ್ಸ್ ಆಗಿದೆ. ಇದರಿಂದಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ನನ್ನ ಸಂಬಳಕ್ಕಿಂತ ಬ್ಯಾಂಕ್ಗೆ ಹಣ ಕಟ್ಟುವುದು ಜಾಸ್ತಿ ಆಗಿದೆ. ಇದರಿಂದ ನಾನು 2022 ರಲ್ಲಿ ನ್ಯಾಯಾಲಯದ ಮೋರೆ ಹೋದೆ ಎನ್ನುತ್ತಾರೆ ವಂಚನೆಗೆ ಒಳಗಾದ ಶರವಣನ್ ಅವರು.
ಖಾಸಗಿ ದೂರಿನ ಮೇರೆಗೆ ಪೊಲೀಸರಿಂದ ಅರೆಸ್ಟ್: ಶರವಣನ್ ಅವರು ತಮಗೆ ಮೋಸವಾಗಿದೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಯ ಮೇಟ್ಟಿಲೇರಿದಾಗ ಪೊಲೀಸರು ಇದು ವೈಯಕ್ತಿಕ ಹಣಕಾಸು ವ್ಯವಹಾರ ಎಂದು ಮಧ್ಯ ಪ್ರವೇಶ ಮಾಡಲು ನಿರಾಕರಿಸುತ್ತಾರೆ. ಇದರಿಂದ ಹತಾಶರಾದ ಶರವಣನ್ರವರು ವಕೀಲರಾದ ವಿಶ್ವ ಅವರನ್ನು ಭೇಟಿ ಮಾಡುತ್ತಾರೆ.
ವಕೀಲರಾದ ವಿಶ್ವ ಅವರು ಪೊಲೀಸರು ಸಹಕರಿಸದೇ ಹೋದಾಗ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುವಂತೆ ಸೂಚಿಸುತ್ತಾರೆ. ಖಾಸಗಿ ದೂರನ್ನು ಪರಿಗಣಿಸಿದ ನ್ಯಾಯಾಲಯ ಉಷಾರವರಿಗೆ ನೋಟಿಸ್ ನೀಡಿದರು ಅದು ವಿಳಾಸದ ಸಮಸ್ಯೆಯಿಂದ ನೋಟಿಸ್ ತಲುಪಲು ಆಗಲಿಲ್ಲ.
ನಂತರ ವಾಟ್ಸ್ಆ್ಯಪ್ ಮೂಲಕವೇ ನೋಟಿಸ್ ನೀಡಲಾಗುತ್ತದೆ. ನಂತರ ಉಷಾರವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಕೋರ್ಟ್ನಿಂದ ವಾರಂಟ್ ಜಾರಿ ಮಾಡಲಾಗುತ್ತದೆ. ಈ ವಾರಂಟ್ ಪಡೆದ ವಿನೋಬನಗರ ಪೊಲೀಸರು ಉಷಾರನ್ನು ಬಂಧಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮುಂದೆ ನ್ಯಾಯಾಲಯ ಏನೂ ಹೇಳುತ್ತದೆ ಎಂದು ಕಾದು ನೋಡಬೇಕಿದೆ ಎನ್ನುತ್ತಾರೆ ವಕೀಲರಾದ ವಿಶ್ವ ಅವರು.
ಇದನ್ನೂ ಓದಿ: ಮಂಗಳೂರಿನಲ್ಲಿ ಮನೆ ಕಳ್ಳತನ ಮಾಡಿ ದೆಹಲಿಗೆ ಪರಾರಿ ಯತ್ನ: ಪ್ರಕರಣ ದಾಖಲಾದ ಮೂರೇ ಗಂಟೆಯೊಳಗೆ ಆರೋಪಿಗಳು ಸೆರೆ