ಶಿವಮೊಗ್ಗ: ಸಿಎಎ, ಎನ್ಆರ್ಸಿ, ಎನ್ಪಿಆರ್ ಎಂಬ ಕತ್ತಿ ಅಲ್ಪಸಂಖ್ಯಾತರ ಮೇಲೆ ತೂಗುತ್ತಿದೆ. ಇದು ಖಂಡನೀಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಾಗರದಲ್ಲಿ ಹೇಳಿದ್ದಾರೆ.
ಮಂಗಳವಾರ ನೆಹರೂ ಮೈದಾನದಲ್ಲಿ ಸಾಗರದ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಮತ್ತು ಕರ್ನಾಟಕ ಅಂಜುಮನ್ ತಂಜೀಮ್ ಸೋಷಿಯಲ್ ಮೂವ್‍ಮೆಂಟ್ ವತಿಯಿಂದ ನಡೆದ ನಮ್ಮ ಸಂವಿಧಾನ ಉಳಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ತಿಮ್ಮಪ್ಪ, ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಕಿಡಿಕಾರಿದರು.
ಬಿಜೆಪಿ ಈ ಕಾಯ್ದೆ ಅನುಷ್ಠಾನಗೊಳಿಸುತ್ತಿರುವ ಉದ್ದೇಶದ ಹಿಂದಿನ ಕುತಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಕಾಯ್ದೆ ಅನುಷ್ಠಾನಕ್ಕೆ ತನ್ನಿ ಎಂದು ಯಾರೂ ಒತ್ತಾಯ ಮಾಡಿರಲಿಲ್ಲ. ಜೊತೆಗೆ ಯಾರೂ ಹೋರಾಟ ಮಾಡಿ ಕೇಂದ್ರವನ್ನು ಒತ್ತಾಯಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಏಕಾಏಕಿ ಈ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಕಿಡಿಕಾರಿದರು.
ರಾಷ್ಟ್ರೀಯ ಪೌರತ್ವ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟ ಆಶಾದಾಯಕ ಬೆಳವಣಿಗೆಯಾಗಿದೆ. ಭವಿಷ್ಯದ ದೃಷ್ಟಿಯಿಂದ ಮತ್ತು ದೇಶದ ಐಕ್ಯತೆ, ಸಮಗ್ರತೆ ಹಿನ್ನೆಲೆಯಲ್ಲಿ ತಿದ್ದುಪಡಿ ಕಾಯ್ದೆಯಲ್ಲಿ ಎಲ್ಲ ಜನಾಂಗವನ್ನು ಸೇರಿಸುವಂತೆ ಒತ್ತಾಯಿಸಿದರು.