ಶಿವಮೊಗ್ಗ : ಗೋ ಹತ್ಯೆಗಳ ಶಾಪದಿಂದ ಕಾಂಗ್ರೆಸ್ ಸರ್ಕಾರ ನಾಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದ ಮಾತಾ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗೋಹತ್ಯೆಗಳು ಆದಾಗ ಪೊಲೀಸರು ಸಹ ಕಂಪ್ಲೇಂಟ್ ತೆಗೆದುಕೊಳ್ಳುತ್ತಿರಲಿಲ್ಲ. ಆ ಗೋಹತ್ಯೆಗಳ ಶಾಪದಿಂದಲೇ ಕಾಂಗ್ರೆಸ್ ಸರ್ಕಾರ ನಾಶವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸೋತರು ಎಂದರು.
ಬಿಜೆಪಿಯವರು ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದೇ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಸ್ವತಂತ್ರ ಬಂದಾಗಿನಿಂದ ಅಧಿಕಾರದಲ್ಲಿತ್ತಲ್ವಾ?. ಎಷ್ಟು ಜನರನ್ನ ದಲಿತ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷ ದಲಿತ ನಾಯಕನನ್ನ ರಾಷ್ಟ್ರಪತಿ ಮಾಡಿದೆ. ರಾಜ್ಯಪಾಲರನ್ನ ಮಾಡಿದೆ ಹಾಗೂ ಕೇಂದ್ರದಲ್ಲಿ 47 ಜನ ದಲಿತರನ್ನ ಕೇಂದ್ರದ ಮಂತ್ರಿಗಳನ್ನಾಗಿ ಮಾಡಿದೆ. ಇದಕ್ಕೆ ಉತ್ತರ ಇವರ ಬಳಿ ಇಲ್ಲ. ಕೇವಲ ಗೊಂದಲ ಸೃಷ್ಟಿ ಮಾಡುವ ಹೇಳಿಕೆ ಅಷ್ಟೇ ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ : ಕಾಂಗ್ರೆಸ್ನಿಂದ ಬಂದವರಿಗೆ ಸರ್ಕಾರದಲ್ಲಿ ಋಣ ತೀರಿಸಲು ಹಿಂದೆ ಮುಂದೆ ನೋಡದೇ ಅವರಿಗೆ ಸಚಿವ ಸ್ಥಾನ ನೀಡಿದೆ. ಬಿಜೆಪಿ ಪಕ್ಷ ಹಾಲು ಇದ್ದಂತೆ, ಹೊರಗಿನಿಂದ ಬರುವವರು ಜೇನು ಇದ್ದಂತೆ. ಹಾಲು ಜೇನು ಸೇರಿ ಸವಿ ಆಗುತ್ತೆ. ಹಾಗೆಯೇ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ನಾಟಕ ಮಾಡುವ ಪಕ್ಷ ಭಾರತೀಯ ಜನತಾ ಪಾರ್ಟಿ ಅಲ್ಲ : ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ಬಂದಿದ್ದೇನೆ. ನಾನು ಕಾಂಗ್ರೆಸ್ನ ಸೊಸೆ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಇನ್ನೊಂದು ಕಡೆ ನಾನು ಕಾಂಗ್ರೆಸ್ನ ಮಗ ಅಂತಾರೆ. ಹೌದಪ್ಪ, ನೀನು ಕಾಂಗ್ರೆಸ್ನ ಮಗ ಸರಿ.
ನಿಮ್ಮದು ಕಾಂಗ್ರೆಸ್ಸೋ ಅಥವಾ ಜೆಡಿಎಸ್ ಪಕ್ಷನೋ.. ನಿನಗೆ ಅಪ್ಪ-ಅಮ್ಮ ಯಾರು ಅಂತಾನೇ ಗೊತ್ತಿಲ್ಲ. ಆದರೆ, ಬಿಜೆಪಿಯಲ್ಲಿ ಪಕ್ಷವೇ ತಾಯಿ ಇದ್ದಂತೆ ಎಂದು ತಿಳಿದುಕೊಳ್ಳುತ್ತಾರೆ. ಸಮಯಕ್ಕೆ ತಕ್ಕಂತೆ ಹೇಳಿಕೊಂಡು ನಾಟಕ ಮಾಡುವ ಪಕ್ಷ ಭಾರತೀಯ ಜನತಾ ಪಾರ್ಟಿ ಅಲ್ಲ ಎಂದು ಟಾಂಗ್ ನೀಡಿದರು.
ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಆದೇಶದ ಮರು ಚರ್ಚೆಯ ಅಗತ್ಯವಿದೆ : ವಿಪಕ್ಷ ನಾಯಕ ಸಿದ್ದರಾಮಯ್ಯ