ಶಿವಮೊಗ್ಗ: ಜೆಎನ್ಎನ್ಸಿಸಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಕಾರು ತಯಾರಿಸಿದ್ದಾರೆ. ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಾತ್ವಿಕ್, ಅಭಿಷೇಕ್, ಕಾರ್ತಿಕ್ ಶೆಟ್ಟಿ ಹಾಗೂ ಮನೋಹರ್ ಈ ಕಾರಿನ ಜನಕರು.
ವಿಶೇಷತೆಗಳು: ಈ ವಿದ್ಯಾರ್ಥಿಗಳ ತಂಡ ತಮ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜೆ.ಅಮಿತ್ ಕುಮಾರ್ ಮಾರ್ಗದರ್ಶನದಲ್ಲಿ ಹಳೆಯ ಇಂಧನ ಚಾಲಿತ ಕಾರನ್ನು ನವೀಕರಿಸಿ, ವಿದ್ಯುತ್ ಚಾಲಿತ ಕಾರು ಸಿದ್ಧಪಡಿಸಿದ್ದಾರೆ. ಕನಿಷ್ಠ 4 ರಿಂದ 5 ಗಂಟೆ ಚಾರ್ಜ್ ಮಾಡಿದರೆ ಈ ಕಾರು 80 ಕಿ.ಮೀ ದೂರ ಚಲಿಸುತ್ತದೆ. ಮನೆಯಲ್ಲಿಯೇ ಚಾರ್ಜ್ ಮಾಡಬಹುದು. ಚಾರ್ಜ್ ಮಾಡಲು 4 ರಿಂದ 5 ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಇದಕ್ಕೆ ಗರಿಷ್ಠ ಅಂದ್ರೆ 20 ರಿಂದ 30 ರೂ. ಖರ್ಚಾಗಬಹುದು ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಕಲಿಕೆಯ ತಾಂತ್ರಿಕ ಕೌಶಲ್ಯ ಜ್ಞಾನದೊಂದಿಗೆ ಎಲೆಕ್ಟ್ರಾನಿಕ್ ಕಾರಿಗೆ ಅಗತ್ಯವಿರುವ ಬಲ ಮತ್ತು ಶಕ್ತಿಯನ್ನು ಮೌಲ್ಯಮಾಪನ ಮಾಡಿ, ಸ್ಥಳೀಯ ಕಾರಿನ ಟ್ರಾನ್ಸಿಷೇನ್ ಡ್ರೈವ್ನೊಂದಿಗೆ ಹೊಸ ಸೂಕ್ತವಾದ ಎಲೆಕ್ಟ್ರಾನಿಕ್ ಪ್ರೈಮ್ ಮೂವರನ್ನು ಸಂಯೋಜಿಸಿ ನವೀಕರಿಸಿದ್ದಾರೆ. ಈ ಕಾರು ನಾಲ್ಕು ಫಾರ್ವಡ್, ಪ್ರೊಪಲ್ಟನ್ ಗೇರ್ ಮೆಕ್ಯಾನಿಸಂನೊಂದಿಗೆ ಒಂದು ರಿವರ್ಸ್ ಪ್ರೊಪಲ್ಟನ್ ಗೇರ್ ಹೊಂದಿದೆ. ಮಾರುಕಟ್ಟೆಯಲ್ಲಿನ ಎಲೆಕ್ಟ್ರಾನಿಕ್ ಕಾರುಗಳಿಗೆ ಆಟೋ ಗೇರ್ಗಳಿವೆ. ಇದಕ್ಕೆ ರೇಗ್ಯುಲರ್ ಗೇರ್ ಗಳಿವೆ. ಈ ಕಾರು ಇತರೆ ಕಾರುಗಳಿಕ್ಕಿಂತ ವಿಭಿನ್ನ. ಅತ್ಯಂತ ಕಡಿಮೆ ದರದಲ್ಲಿ ಬಳಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ನಾಳೆ ಶರಾವತಿ ಹಿನ್ನೀರಿನ ಜನತೆಯ ಪಾದಯಾತ್ರೆ
ಭಾರತ ಸರ್ಕಾರದಿಂದ 2.50 ಲಕ್ಷ ರೂ ಅನುದಾನ: ಕಾರು ತಯಾರಿಕೆಗೆ ಕೇಂದ್ರ ಸರ್ಕಾರ ನೀಡುವ ನ್ಯೂ ಜೆನ್ ಐಇಡಿಸಿ (NEW GEN IEDC) ವತಿಯಿಂದ 2.50 ಲಕ್ಷ ರೂ. ಅನುದಾನ ದೊರೆತಿದೆ.