ಶಿವಮೊಗ್ಗ: ಎಸ್ ಬಂಗಾರಪ್ಪನವರ ಬೆಂಬಲಿಗರು ಹಾಗೂ ಕೆಎಎಸ್ ಮಾಜಿ ಅಧಿಕಾರಿ ಹೆಚ್ ಟಿ ಬಳಿಗಾರ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ.
ಬಳಿಗಾರ್ ಈ ಮೊದಲು ಜೆಡಿಎಸ್‌ನಲ್ಲಿದ್ದು 2013 ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ 15 ಸಾವಿರ ಮತಗಳಿಸಿದ್ದರು. 2018 ರಲ್ಲಿ ಮತ್ತೆ ಸ್ಪರ್ಧಿಸಿದ್ದು ಸುಮಾರು 13,500 ಮತಗಳನ್ನು ಪಡೆದಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹಾಗೂ ಮೈತ್ರಿ ಸರ್ಕಾರದಲ್ಲಿ ಬಳಿಗಾರ ಅವರನ್ನು ಗುರುತಿಸುವ ಕಾರ್ಯ ನಡೆಯಲಿಲ್ಲ. ಹೀಗಾಗಿ, ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದರು.
ಮಗನ ಹಾದಿ ಸುಗಮಗೊಳಿಸಿದ ಬಿಎಸ್ವೈ: ಹೆಚ್ ಟಿ ಬಳಿಗಾರ್ ಬಿಜೆಪಿ ಸೇರ್ಪಡೆಯಿಂದ ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಹಾದಿ ಸುಗಮವಾಗುತ್ತದೆ ಎಂಬ ದೃಷ್ಟಿಯಿಂದ ಇವರನ್ನು ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆ ಆಗ್ತಾರಾ ಮಾಜಿ ಸಚಿವ ವರ್ತೂರು.. ಪರಿಷತ್ ಎಲೆಕ್ಷನ್‌ನಲ್ಲಿ ಮತ್ತೆ 'ಪ್ರಕಾಶ'ಮಾನ..
ತರಿಕೆರೆಯಲ್ಲಿ ಸಿಎಂ ಜೊತೆ ಬಳಿಗಾರ್ ಮಾತುಕತೆ: ನ.15 ರಂದು ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೆ ತರಿಕೆರೆಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಜೊತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹೆಚ್ ಟಿ ಬಳಿಗಾರ್ ಮಾತುಕತೆ ನಡೆಸಿದ್ದಾರೆ.
ಇಷ್ಟು ವರ್ಷ ಜೆಡಿಎಸ್ನಲ್ಲಿ ಗುರುತಿಸಿಕೊಂಡು ಬಿಜೆಪಿಯ ಜೊತೆ ಅಂತರ ಕಾಯ್ದುಕೊಂಡಿದ್ದ ಬಳಿಗಾರ್, ಈಗ ಅದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ತಮ್ಮ ಅಭಿಮಾನಿಗಳು, ಕಾರ್ಯಕರ್ತರ ಜೊತೆ ಮಾತುಕತೆ, ಸಭೆ ನಡೆಸಿ ನಂತರ ಬಿಜೆಪಿ ಸೇರ್ಪಡೆಯಾಗುವುದನ್ನು ಖಚಿತಪಡಿಸುವೆ ಎಂದು 'ಈಟಿವಿ ಭಾರತ'ಕ್ಕೆ ಅವರು ತಿಳಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ಆಪರೇಷನ್ ಮಂಡ್ಯ, ಕೋಲಾರ, ಉಡುಪಿ, ಮೈಸೂರು: ಬಿಜೆಪಿ ಸೇರಿದ ಕಾಂಗ್ರೆಸ್, ಜೆಡಿಎಸ್ ನಾಯಕರು