ಶಿವಮೊಗ್ಗ: ಜಿಲ್ಲೆಯ ನೆಲ, ಜಲ ಉಳಿವಿಗಾಗಿ ಜಿಲ್ಲಾ ಜೆಡಿಎಸ್ ಯಾವಾಗಲೂ ಬದ್ಧವಾಗಿದೆ. ಜುಲೈ 10 ರಂದು ನಡೆಯುವ ಶರಾವತಿಗಾಗಿ ಶಿವಮೊಗ್ಗ ಜಿಲ್ಲಾ ಬಂದ್ಗೆ ಜೆಡಿಎಸ್ ಬೆಂಬಲವಾಗಿ ನಿಲ್ಲುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ ಅವರು, ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು ಅವೈಜ್ಞಾನಿಕವಾಗಿದೆ. ಈ ಯೋಜನೆ ಕೈ ಬಿಟ್ಟು ಮಲೆನಾಡಿನ ಹಿತ ಕಾಯುವಂತೆ ಆಗಬೇಕು ಎಂದು ಸಿಎಂ ಕುಮಾರಸ್ವಾಮಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಮನವಿಗೆ ಸಿಎಂ ಪೂರಕವಾಗಿ ಸ್ಪಂದಿಸಿದ್ದು, ಈ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿ ಇದೆ. ಶರಾವತಿ ನದಿ ನೀರು ಕುರಿತು ಹೋರಾಟಗಾರರ ಜೊತೆ ಅಮೆರಿಕದಿಂದ ಬಂದ ನಂತ್ರ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದರು.
ಇನ್ನು ಈ ಬಂದ್ಗೆ ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿ, ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನುರಾಧ ಅವರಿಗೆ ಮನವಿ ಸಲ್ಲಿಸಿದ್ದಾರೆ. ಜುಲೈ 10 ರಂದು ನಡೆಯುವ ಶಿವಮೊಗ್ಗ ಜಿಲ್ಲಾ ಬಂದ್ಗೆ ಜಿಲ್ಲಾ ವಕೀಲರ ಸಂಘ ಬೆಂಬಲ ಸೂಚಿಸಿ, ಅಂದು ಕೋರ್ಟ್ ಕಲಾಪ ಬಹಿಷ್ಕಾರ ಮಾಡಲಾಗುವುದು ಎಂದು ತಿಳಿಸಿದೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಧು ಅವರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು. ವಿದ್ಯುತ್ಗಾಗಿ ಮೀಸಲಾಗಿಟ್ಟಿರುವ ಯೋಜನೆ ಕುಡಿವ ನೀರಿಗಾಗಿ ಬಳಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ವಕೀಲರ ಸಂಘ ಪ್ರಶ್ನೆ ಮಾಡಿದೆ.