ಶಿವಮೊಗ್ಗ: ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 54 ಘೋಷಿತ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಮನೆಯ ಹಕ್ಕು ಪತ್ರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಹೆಗಡೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಒಡೆತನದ ಭೂ ಪ್ರದೇಶದಲ್ಲಿ 24, ಮಹಾನಗರ ಪಾಲಿಕೆ ಭೂ ಒಡೆತನ ಪ್ರದೇಶದಲ್ಲಿ 10, ಖಾಸಿ ಒಡೆತನ ಭೂ ಪ್ರದೇಶದಲ್ಲಿ 19 ಹಾಗೂ ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿಗೆ ಸೇರಿದ 1 ಕೊಳಚೆ ಪ್ರದೇಶ ಸೇರಿ ಒಟ್ಟು 54 ಕೊಳಚೆ ಪ್ರದೇಶಗಳಿವೆ. ಇಲ್ಲಿ 8 ಸಾವಿರ ಕುಟುಂಬಗಳು ಮನೆ ನಿರ್ಮಾಣ ಮಾಡಿಕೊಂಡು ವಾಸವಾಗಿವೆ. ಈಗಾಗಲೇ 2,741 ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 3,219 ಮನೆಗಳಿಗೆ ಹಕ್ಕುಪತ್ರ ನೀಡಬೇಕಿದೆ ಎಂದರು.
ಖಾಸಗಿ ಒಡೆತನದ 19 ಕೊಳಚೆ ಪ್ರದೇಶಗಳನ್ನು ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಹಾಗೂ ನಿರ್ಮಾಲನ ಕಾಯ್ದೆ 1973 ರ ಕಲಂ 17 ರಂತೆ ಭೂ ಸ್ವಾಧೀನ ಮಾಡಿಕೊಂಡು ಮೇಲ್ಕಂಡ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ 2,022 ಮನೆಗಳಿಗೆ ಹಕ್ಕುಪತ್ರ ನೀಡಬೇಕಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ ಹಕ್ಕುಪತ್ರಗಳು ಸರಿ ಇಲ್ಲದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಬಳಿ ಮಾತನಾಡಿ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದರು.
ಈ ವೇಳೆ ಪಾಲಿಕೆ ವಿರೋಧ ಪಕ್ಷದ ನಾಯಕ ಯೊಗೀಶ್, ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಯುಮುನಾ ರಂಗೇಗೌಡ, ಶಬ್ಬೀರ್, ಆರ್.ಸಿ.ನಾಯಕ್, ಮುಖಂಡರಾದ ಕಾಶಿನಾಥ್ ಸೇರಿ ಇತರರು ಹಾಜರಿದ್ದರು.