ಶಿವಮೊಗ್ಗ: ಇಂಗ್ಲೆಂಡ್ನಿಂದ ಶಿವಮೊಗ್ಗ ಜಿಲ್ಲೆಗೆ ಇದುವರೆಗೂ ಒಂದು ಮಗು ಸೇರಿದಂತೆ 23 ಜನ ಆಗಮಿಸಿದ್ದಾರೆ. ಇವರೆಲ್ಲರ ಗಂಟಲು ದ್ರವದ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. 8 ಜನರ ವರದಿ ನೆಗೆಟಿವ್ ಬಂದಿದೆ. ಉಳಿದವರ ವರದಿ ಸಂಜೆ 6 ಗಂಟೆಗೆ ಲಭ್ಯವಾಗಲಿದೆ. ಅವರದ್ದು ಸಹ ನೆಗೆಟಿವ್ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇಂಗ್ಲೆಂಡ್ನಿಂದ ಬಂದ 23 ಮಂದಿಯನ್ನು ಐಸೋಲೇಷನ್ ಮಾಡಿ ಇವರಿಗೆ ಸರ್ಕಾರದ ಮಾರ್ಗಸೂಚಿಯನ್ನು ತಿಳಿಸಲಾಗಿದೆ. ಎಲ್ಲರೂ ಒಂದು ವಾರದ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದರು. ನಂತರ ಸರ್ಕಾರ ನೀಡಿದ ಮಾಹಿತಿ ಮೇರೆಗೆ ಅವರನ್ನು ಹುಡುಕಿ, ಗಂಟಲು ದ್ರವದ ಮಾದರಿ ಪಡೆಯಲಾಗಿದೆ. ಎಲ್ಲರನ್ನು ಈ ಹಿಂದೆ ಏರ್ಪೋರ್ಟ್ನಲ್ಲಿ ಪರೀಕ್ಷೆ ಮಾಡಲಾಗಿದೆ. ಆದರೂ ಸಹ ಮತ್ತೊಮ್ಮೆ ಅವರ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ.. ಶಿವಮೊಗ್ಗದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಈಗಾಗಲೇ ಶಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು ಸೇರಿದಂತೆ ಎಲ್ಲರನ್ನು ಪತ್ತೆ ಹಚ್ಚಲಾಗಿದೆ. ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ಹತೋಟಿಯಲ್ಲಿದೆ. ಆದರೂ ಸಾರ್ವಜನಿಕರು ನಿರ್ಲಕ್ಷ್ಯ ತೋರದೆ ಕೋವಿಡ್ ನಿಯಮ ಪಾಲಿಸಬೇಕಿದೆ ಎಂದು ವಿನಂತಿ ಮಾಡಿಕೊಂಡರು.
ರಾತ್ರಿ ಕರ್ಫ್ಯೂವನ್ನು ಸರ್ಕಾರ ಜಾರಿ ಮಾಡಿದ್ದು, ಯಾವ ರೀತಿಯ ಮಾರ್ಗಸೂಚಿ ನೀಡುತ್ತದೆ ಎಂಬುದನ್ನು ನೋಡಿ ಅನುಸರಿಸಲಾಗುವುದು ಎಂದರು.