ಶಿವಮೊಗ್ಗ: ಇಂದು ದೇಶಾದ್ಯಂತ 73ನೇ ಸ್ವಾತಂತ್ರೋತ್ಸವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯಲ್ಲಿ ಮಾತ್ರ ಸ್ವಾತಂತ್ರ್ಯ ದಿನಾಚರಣೆಗಾಗಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು.
ಕಾರ್ಖಾನೆ ವತಿಯಿಂದ ಪ್ರತಿ ವರ್ಷ ವಿಐಎಸ್ಎಲ್ನ ಮೈದಾನದಲ್ಲಿ ಅದ್ದೂರಿಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಖಾನೆಯನ್ನು ಮಾರಾಟಕ್ಕೆ ಇಟ್ಟಿರುವುದರಿಂದ ಕಾರ್ಮಿಕರು ಈ ಕುರಿತು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಅಧಿಕಾರಿ ವರ್ಗ ಕಾರ್ಮಿಕರನ್ನು ದೂರವಿಟ್ಟು, ಕಾರ್ಖಾನೆಯ ಒಳಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು. ಇದರಿಂದ ಆಕ್ರೋಶಗೊಂಡಿರುವ ಕಾರ್ಮಿಕರು, ಕಾರ್ಯಪಾಲಕ ನಿರ್ದೇಶಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಪ್ರವೀಣ್ ಕುಮಾರ್ ಮನೆ ಮುಂದೆ ಧರಣಿ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ ಆಗಮಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಕಾರ್ಮಿಕರ ಧರಣಿ ಹಾಗೂ ಶಾಸಕರ ಮಾತುಕತೆಯಿಂದ VISL ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಮೈದಾನದಲ್ಲಿ ಆಚರಿಸಿದರು.