ಶಿವಮೊಗ್ಗ: ವಿದ್ಯುತ್ ಇಂದು ಪ್ರತಿಯೊಬ್ಬರಿಗೂ ಅನಿವಾರ್ಯ. ವಿದ್ಯುತ್ ಉತ್ಪಾದನೆ ಹೆಚ್ಚಿಸಿದರೂ ವಿದ್ಯುತ್ ಬೇಡಿಕೆ ದಿನೆದಿನೇ ಹೆಚ್ಚುತ್ತಾ ಹೋಗುತ್ತಿದೆ. ಜೊತೆಗೆ ವಿದ್ಯುತ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೆಲವರು ಅನಿವಾರ್ಯವಾಗಿ ವಿದ್ಯುತ್ ಕಳ್ಳತನ ಮಾಡಿದರೆ, ಮತ್ತೆ ಕೆಲವರು ಚಾಣಾಕ್ಷತೆ ತೋರಲು ವಿದ್ಯುತ್ ಕದಿಯುತ್ತಿದ್ದಾರೆ.
ವಿದ್ಯುತ್ ಕಳ್ಳತನ ಭೇದಿಸಲು ಕರ್ನಾಟಕ ವಿದ್ಯುತ್ ನಿಗಮ ಜಿಲ್ಲೆಗೊಂದು ವಿದ್ಯುತ್ ಜಾಗೃತದಳ ಪೊಲೀಸ್ ಠಾಣೆ ನಿರ್ಮಿಸಿದೆ. ಶಿವಮೊಗ್ಗ ಮೆಸ್ಕಾಂಗೆ ಸೇರಿದ ಕಾರಣ ಇಲ್ಲಿ ಜಾಗೃತದಳ ಪೊಲೀಸ್ ಠಾಣೆ ಇದೆ. ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಕುರಿತು ದೂರು ಬಂದ ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುತ್ತಾರೆ.
ಇದನ್ನೂ ಓದಿ...ಮ್ಯಾನ್‍ಹೋಲ್ ದುರಂತ ಸಂಭವಿಸಿದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ: ಶಿವಮೊಗ್ಗ ಡಿಸಿ
ಜಾಗೃತ ದಳದ ಕಾರ್ಯ ವೈಖರಿ: ಶಿವಮೊಗ್ಗದಲ್ಲಿ ಮೆಸ್ಕಾಂ ಜಾಗೃತದಳವಿದ್ದು, ಅದಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇರುತ್ತಾರೆ. ಅವರು ಈ ದಳದ ಮುಖ್ಯಾಧಿಕಾರಿ. ವಿದ್ಯುತ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಗಲಾಟೆಗಳು ಜರುಗುವ ಹೆಚ್ಚು. ಹೀಗಾಗಿ, ಅಧಿಕಾರಿಗಳ ಜೊತೆಗೆ ಪೊಲೀಸ್ ಇಲಾಖೆಯ ಓರ್ವ ಪಿಎಸ್ಐ, ಓರ್ವ ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಅನ್ನು ಕಳುಹಿಸಲಾಗುತ್ತದೆ. ಇವರೆಲ್ಲಾ ಒಂದು ತಂಡವಾಗಿ ದಾಳಿ ನಡೆಸುತ್ತಾರೆ.
ದಂಡ, ಪ್ರಕರಣ ದಾಖಲಿಸುವ ಅಧಿಕಾರ: ಮೆಸ್ಕಾಂ ಜಾಗೃತದಳಕ್ಕೆ ವಿದ್ಯುತ್ ಕಳ್ಳತನ ಮತ್ತು ದುರುಪಯೋಗದ ಕುರಿತು ಕಂಡು ಬಂದಲ್ಲಿ ಸ್ಥಳದಲ್ಲೇ ದಂಡ ವಿಧಿಸುವ ಮತ್ತು ಪ್ರಕರಣ ದಾಖಲಿಸುವ ಅಧಿಕಾರವಿದೆ. ಮೊದಲ ಬಾರಿಯ ತಪ್ಪಿಗೆ ಬಳಸಿರುವ ವಿದ್ಯುತ್ ಪ್ರಮಾಣದ ಮೂರು ಪಟ್ಟು ದಂಡ, 2ನೇ ಬಾರಿ ಆರು ಪಟ್ಟು ದಂಡ, ನಂತರ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ಈ ಎಫ್ಐಆರ್ ಅನ್ನು ಸಂಬಂಧಪಟ್ಟ ಕೋರ್ಟ್ಗೆ ಕಳುಹಿಸಲಾಗುತ್ತದೆ. ವಿಚಾರಣೆ ನಡೆಸುವ ಕೋರ್ಟ್ ದಂಡ ಅಥವಾ ಶಿಕ್ಷೆ ವಿಧಿಸುತ್ತದೆ.
ವಿದ್ಯುತ್ ದುರುಪಯೋಗ ಹಾಗೂ ಕಳ್ಳತನದ ಪ್ರಕರಣಗಳ ವಿವರ
ವರ್ಷವಾರು | ವಿದ್ಯುತ್ ದುರುಪಯೋಗ | ದಂಡ (ರೂ.ಗಳಲ್ಲಿ) | ವಿದ್ಯುತ್ ಕಳ್ಳತನ | ದಂಡ (ರೂ.ಗಳಲ್ಲಿ) |
2018-19 | 484 ಪ್ರಕರಣ | 1,41,85,086 | 89 ಪ್ರಕರಣ | 7,95,428 |
2019-20 | 427 ಪ್ರಕರಣ | 1,12,52,372 | 63 ಪ್ರಕರಣ | 7,49,144 |
2020-21 | 239 ಪ್ರಕರಣ | 96,35,733 | 25 ಪ್ರಕರಣ | 1,78,839 |
ವಿದ್ಯುತ್ ಕಳ್ಳತನ ಗ್ರಾಮೀಣ ಭಾಗದಲ್ಲೇ ಹೆಚ್ಚಾಗಿದ್ದು, ನಗರದಲ್ಲಿ ಕಡಿಮೆಯಾಗಿದೆ. ಕೈಗಾರಿಕಾ ವಲಯದಲ್ಲಿ ವಿದ್ಯುತ್ ಕಳ್ಳತನ ಇಲ್ಲವೆ ಇಲ್ಲ ಎನ್ನುತ್ತಾರೆ ಜಾಗೃತದಳದ ಅಧಿಕಾರಿಗಳು.