ಶಿವಮೊಗ್ಗ: ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ತೀರ್ಥಹಳ್ಳಿಯಲ್ಲಿ ಇಂದು ನೆರೆದಿರುವ ಜನರೇ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಥಹಳ್ಳಿಯಲ್ಲಿ ನಡೆದ 618 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೇರವೇರಿಸುವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮ ಕಂಡು ಮಾತನಾಡಿದರು.
ತೀರ್ಥಹಳ್ಳಿಯ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 618 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಉದ್ಘಾಟಿಸಿದ್ದು ಸಂತೋಷವಾಗಿದೆ. ನಿಮ್ಮನ್ನು ನೋಡಿ ನನಗ ಬಹಳ ಸಂತೋಷವಾಗಿದೆ. ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಜನ ಸಂಖ್ಯೆಯೇ ಸಾಕ್ಷಿ ಎಂದರು.
ಹಿಂದೆ 600 ಕೋಟಿ ಅಭಿವೃದ್ಧಿಯ ಶಂಕುಸ್ಥಾಪನೆ ಇದೇ ತೀರ್ಥಹಳ್ಳಿಯಲ್ಲಿ ನಡೆದಿತ್ತು. ಆದರೆ ಅದು ಎಲ್ಲಿ ಹೋಯ್ತು ಏನಾಯ್ತು ಅಂತ ಗೂತ್ತಾಗಲಿಲ್ಲ. ಈಗ ಆದ ಶಂಕುಸ್ಥಾಪನೆಗೆ ಎಲ್ಲಾ ರೀತಿಯ ಅನುಮೋದನೆಯನ್ನು ನೀಡಲಾಗಿದೆ. ಮಲೆನಾಡಿನ ಹಲವು ಅಭಿವೃದ್ಧಿಯ ಜೊತೆಗೆ ಅನೇಕ ಸಮಸ್ಯೆಗಳ ಬಗ್ಗೆ ನಮ್ಮ ನಾಯಕ ಯಡಿಯೂರಪ್ಪನವರ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಶರಾವತಿ ಸಂತ್ರಸ್ತರಿಗೆ ಡಿಸೆಂಬರ್ ಒಳಗೆ ಪರಿಹಾರ : ಶರಾವತಿ ಸಂತ್ರಸ್ತರ ಸಮಸ್ಯೆಯ ಕುರಿತು ಯಡಿಯೂರಪ್ಪ ಅವರು ತಮ್ಮ ಮನೆಗೆ ಕರೆಯಿಸಿ, ಸಮಸ್ಯೆ ಪರಿಹರಿಸಬೇಕೆಂದು ಸೂಚನೆ ನೀಡಿದರು. ಅಧಿಕಾರದಲ್ಲಿದ್ದಾಗ ಸೂಕ್ತ ರೀತಿಯಲ್ಲಿ ಹಕ್ಕು ಪತ್ರ ವಿತರಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಅದನ್ನು ಜೀವಂತ ಸಮಸ್ಯೆಯಾಗಿಸುವ ರೀತಿ ಮಾಡಿತ್ತು. ಆ ಕಾರಣ ಇದಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆ ಮಾಡುತ್ತೇವೆ. ಈ ಸಮಸ್ಯೆಗೆ ಡಿಸಂಬರ್ ಒಳಗೆ ಪರಿಹರಿಸುತ್ತೇವೆ. ಅಂದು ಸರಿಯಾಗಿ ಕ್ರಮ ಜರುಗಿಸಿದ್ದರೆ, ಇಂದು ಪಾದಯಾತ್ರೆಯೇ ಬೇಡವಾಗಿತ್ತು ಎಂದು ನಾಳೆಯ ಪಾದಯಾತ್ರೆಯ ಕುರಿತು ಕುಟುಕಿದರು.
ಅಡಕೆ ಎಲೆಚುಕ್ಕಿ ರೋಗಕ್ಕೆ ನಮ್ಮ ಅಧಿಕಾರಿಗಳಿಗ ಸೂಚನೆ ನೀಡಿದ್ದೇನೆ. ಡೀಮ್ಡ್ ಫಾರೆಸ್ಟ್ ಅನ್ನು ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ತೀರ್ಥಹಳ್ಳಿಯದ್ದೇವೆ ಬಹುಪಾಲ ಹೊಂದಿದೆ ಎಂದರು.
ಜ್ಞಾನೇಂದ್ರ ಅರವಗೆ ಜ್ಞಾನ ಇದೆ, ಅದೇ ರೀತಿ ಇಂದ್ರನಷ್ಟೇ ಶಕ್ತಿ ಇದೆ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜ್ಞಾನವೂ ಇದೇ, ಅದೇ ರೀತಿ ಶಕ್ತಿಯೂ ಇದೆ ಎಂದು ಸಿಎಂ ಹೊಗಳಿದರು. ಜ್ಞಾನೇಂದ್ರ ಅವರಿಗೆ ತೀರ್ಥಹಳ್ಳಿ ಅಭಿವೃದ್ಧಿಯ ಬಗ್ಗೆ ತಿಳಿದಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ಆಶೀರ್ವಾದ ಮಾಡಿ ಎಂದರು.
ಇಲ್ಲೇ ಶಿಕ್ಷಣ ಸಚಿವರಿದ್ದರು. ಅವರಿಗೆ ಒಂದೇ ಒಂದು ಶಾಲೆಯ ಕೊಠಡಿ ಕಟ್ಟಲು ಅಗಲಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೆಸರು ಹೇಳದೆ ಟಾಂಗ್ ಕೊಟ್ಟರು. ಆದರೆ ನಾವು ತಾಲೂಕಿಗೆ 45 ಕೊಠಡಿಗಳನ್ನು ನೀಡಿದ್ದೇವೆ. ಬಲಿಷ್ಠ ಕರ್ನಾಟಕ ಕಟ್ಟುವ ಆಶಯವನ್ನು ಹೊಂದಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಮತ್ತೆ ಜ್ಞಾನೇಂದ್ರ ಅವರಿಗೆ ಅವಕಾಶ ಕೊಡಿ: ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪನವರು, ನಾನು ತೀರ್ಥಹಳ್ಳಿಗೆ ಸಾಕಷ್ಟು ಸಲ ಬಂದಿದ್ದೇನೆ. ಆದರೆ ಇಷ್ಟೊಂದು ಜನಸ್ತೋಮ ನೋಡಿದ್ದು ಇದೇ ಮೊದಲು. ಮುಂಬರುವ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರು 40 ರಿಂದ 50 ಸಾವಿರ ಮತಗಳ ಅಂತರಿಂದ ಗೆಲುವು ಗ್ಯಾರಂಟಿ ಎಂದು ಭವಿಷ್ಯ ನುಡಿದರು.
ತೀರ್ಥಹಳ್ಳಿ ಅತಿ ಹೆಚ್ಚು ಅನುದಾನ: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಗೃಹ ಸಚಿವರು, ತೀರ್ಥಹಳ್ಳಿ ಕ್ಷೇತ್ರ ಜನರ ಆಶೀರ್ವಾದದಿಂದ ನಾನು 4ನೇ ಬಾರಿಗೆ ಶಾಸಕನಾಗಿ, ಸಚಿವನಾಗಿದ್ದೇನೆ. ಇದನ್ನು ಬಳಸಿಕೊಂಡು, ತೀರ್ಥಹಳ್ಳಿಗೆ 618 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದರು.
ಎಲೆಚುಕ್ಕಿಗೆ ಶಾಶ್ವತ ಪರಿಹಾರ: ಅಡಿಕೆ ಬೆಳೆಗಾರರ ಪರವಾಗಿ ನಮ್ಮ ಸರ್ಕಾರವಿದೆ. ಅಡಿಕೆ ರಕ್ಷಣೆ ಬಗ್ಗೆ ಕೇಂದ್ರದ ಗಮನ ಹರಿಸಲಾಗಿದೆ. ಎಲೆಚುಕ್ಕಿ ರೋಗದ ಬಗ್ಗೆ ಮುಖ್ಯಮಂತ್ರಿಗಳೇ ಸ್ವತಃ ಅಡಿಕೆ ತೋಟಕ್ಕೆ ಭೇಟಿ ನೀಡಿ ಗಮನಿಸಿದ್ದಾರೆ. ಎಲೆಚುಕ್ಕಿ ರೋಗದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆಯಾಗಿದೆ. ಅಡಿಕೆ ಶಾಸಕರೇ ಸೇರಿ ಮುಂದಿನ ದಿನಗಳಲ್ಲಿ ಸಭೆ ನಡೆಸಲಿದ್ದೇವೆ. ಅಡಿಕೆ ರೋಗಕ್ಕೆ ಕಾಲ್ನಡಿಗೆ ಜಾಥಾ ಪರಿಹಾರವಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಪಾದಯಾತ್ರೆಗೆ ಸಚಿವ ಆರಗ ಟಾಂಗ್ ನೀಡಿದರು.
ಸಂತ್ರಸ್ತರ ಪರವಾಗಿ ನಮ್ಮ ಸರ್ಕಾರ : ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನಮ್ಮ ಸರ್ಕಾರವಿದೆ. 60 ವರ್ಷಗಳ ಕಾಲ ಆಡಳಿತ ನಡೆಸಿರುವವರು ಸಂತ್ರಸ್ತರಿಗೆ ಏನೂ ಮಾಡಲಿಲ್ಲ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ಇವರಿಗೆ ಆಗಿಲ್ಲ. ಈಗ ನಮ್ಮ ಮೇಲೆ ದೂರುತ್ತಿದ್ದಾರೆ. ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ನಾರಾಯಣ ಗೌಡ ಸೇರಿದಂತೆ ಇತರರಿದ್ದರು. ಇದೇ ವೇಳೆಗೆ ನಾಗರಿಕ ಸನ್ಮಾನ ನಡೆಸಲಾಯಿತು.
ಇದನ್ನೂ ಓದಿ: ವಂದೇ ಮಾತರಂಗೆ ಅವಮಾನ ಆರೋಪ: ಸಿದ್ದರಾಮಯ್ಯ ಕ್ಷಮೆಗೆ ಬಿಜೆಪಿ ಆಗ್ರಹ