ಶಿವಮೊಗ್ಗ : ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ನನ್ನ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆಯಾಗುತ್ತಿದೆ. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಶಿವಮೊಗ್ಗ ಏರ್ಪೋರ್ಟ್ ಪ್ರಧಾನಿ ಮೋದಿಯವರಿಂದ ಉದ್ಘಾಟನೆಯಾಗುತ್ತಿದೆ. ನಾಳೆ ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಾಗೂ ಕ್ಷಣ. ಪ್ರಧಾನಿ ಮೋದಿಯವರೇ ನನ್ನ ಜನ್ಮದಿನದಂದು ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡುತ್ತಿರುವುದು ಸಂತೋಷದ ಸಂಗತಿ. ನಾಳಿನ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಭಾಗವಹಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ವಿನಂತಿಸಿದರು.
ಮೋದಿಯಿಂದ ವಿಮಾನ ನಿಲ್ದಾಣ ಉದ್ಘಾಟನೆ : ಇಷ್ಟು ಕಡಿಮೆ ವೆಚ್ಚದಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣ ಸಾಧ್ಯ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕೇವಲ ಎರಡೂವರೆ ವರ್ಷದಲ್ಲಿ, ಕಡಿಮೆ ವೆಚ್ಚದಲ್ಲಿ ರಾಜ್ಯದಲ್ಲೇ ಮೊದಲು ಶಿವಮೊಗ್ಗದಲ್ಲಿ ಏರ್ಪೋರ್ಟ್ ನಿರ್ಮಾಣವಾಗಿದೆ. ಇಲ್ಲಿ ಎಲ್ಲಾ ರೀತಿಯ ವಿಮಾನಗಳಿಗೆ ಅನುಕೂಲವಾಗುವಂತ ಲ್ಯಾಂಡಿಂಗ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕೂಡ ಇದೆ. ಹಾಗಾಗಿ ಪ್ರಧಾನಿಗಳೇ ಬಂದು ಇದನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಪ್ರಧಾನಿಗಳು ಜಿಲ್ಲೆಗೆ ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತಂದಿದೆ. ಎಲ್ಲರೂ ದೊಡ್ಡ ಪ್ರಮಾಣದಲ್ಲಿ ಬಂದು ಪ್ರಧಾನಿ ಅವರ ಮಾತು ಕೇಳಬೇಕು ಎಂದು ಕಾರ್ಯಕರ್ತರಿಗೆ ಬಿಎಸ್ವೈ ಕರೆ ನೀಡಿದರು.
ಕಾರ್ಯಕ್ರಮಕ್ಕೆ ಬರಲು ಯಾವುದೇ ಪಾಸ್ ನ ಅವಶ್ಯಕತೆ ಇಲ್ಲ. ಸಾರ್ವಜನಿಕರು ಶಾಂತ ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ನನಗೆ ನಿಮ್ಮ ಜೀವನದಲ್ಲಿ ಮರೆಯಲಾಗದ ದಿನ ಯಾವುದು ಎಂದು ಯಾರಾದರೂ ಪ್ರಶ್ನೆ ಕೇಳಿದರೆ ನಾನು ಫೆ.27ರಂದು ಏರ್ಪೋರ್ಟ್ ಉದ್ಘಾಟನೆ ದಿನ, ಪ್ರಧಾನಿಗಳೇ ಬಂದು ಉದ್ಘಾಟನೆ ಮಾಡಿರುವುದು ಎಂದು ಹೆಮ್ಮೆಯಿಂದ ಹೇಳಲು ಇಷ್ಟ ಪಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ನಾನು ಚುನಾವಣೆಗೆ ನಿಲ್ಲದಿದ್ದರೂ ಕೂಡ ರಾಜ್ಯ ಪ್ರವಾಸ ಮಾಡುತ್ತೇನೆ. ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ. ಅದಕ್ಕೆ ಬೇಕಾದ ಎಲ್ಲಾ ಶ್ರಮವನ್ನು ನಮ್ಮ ಕಾರ್ಯಕರ್ತರು ಹಾಕುತ್ತಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ನಾವೇ ನಿರ್ಣಾಯಕ ಪಾತ್ರ ವಹಿಸುವುದು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಎಸ್ವೈ, ವಿರೋಧ ಪಕ್ಷದ ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಮನಸಿನಲ್ಲಿ ಯಾರಿಗೂ ಬಹುಮತ ಬರಬಾರದು ಎಂಬ ಭಾವನೆ ಇದೆ. ಆದರೆ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದರಿಂದ ಅಂತಹ ಹೇಳಿಕೆಗೆ ಬೆಲೆ ಇಲ್ಲ. ಚುನಾವಣೆ ನಂತರ ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
ನಾನು ಈಗಾಗಲೇ ನಿರ್ಧಾರ ಮಾಡಿದ್ದೇನೆ. ಯಾರು ನನಗೆ ಬಲವಂತ ಮಾಡಿಲ್ಲ. ನಾನೇ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಒಬ್ಬ ಕಾರ್ಯಕರ್ತನಾಗಿ ರಾಜ್ಯದ ಉದ್ದಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ನಿರ್ವಹಿಸುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯು ನಮಗೆ ಸವಾಲು. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಏನು ಮಾಡಬೇಕೋ ಆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಿಎಸ್ವೈ, ಇದು ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ. ಈ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸಿ ನಿರ್ಧಾರ ಕೈಗೊಂಡು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಬಿಜೆಪಿ ಪೋಸ್ಟರ್ ಮೇಲೆ ಕಾಂಗ್ರೆಸ್ ಪೋಸ್ಟರ್ ಹಚ್ಚುವ ವಿಚಾರವಾಗಿ ಮಾತನಾಡಿ, ಇದನ್ನು ನಾವು ಮಾಡಬಾರದು. ಅವರು ಮಾಡಬಾರದು. ಇದು ಯಾರಿಗೂ ಶೋಭೆ ತರಲ್ಲ ಎಂದು ಹೇಳಿದರು.
ಇದನ್ನೂ ಓದಿ : ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ: ನಗರದೆಲ್ಲೆಡೆ ರಾರಾಜಿಸುತ್ತಿರುವ ಕಮಲದ ಫ್ಲೆಕ್ಸ್