ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ 4 ಲಕ್ಷ ಜನರಿಗೆ ಉಚಿತವಾಗಿ ಆರ್ಯವೇದ ಇಮ್ಯುನಿಟಿ ಬೂಸ್ಟರ್ ಕಿಟ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ನಗರದ ಹೊರವಲಯದ ಪೇಸ್ ಕಾಲೇಜಿನಲ್ಲಿ ಇಮ್ಯುನಿಟಿ ಬೂಸ್ಟರ್ ಕಿಟ್ ವಿತರಣೆಯ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿ, ಆಯುರ್ವೇದ ಇಮ್ಯುನಿಟಿ ಬೂಸ್ಟರ್ ಕಿಟ್ ಪ್ಯಾಕಿಂಗ್ ನಡೆಯುತ್ತಿದೆ. ಪ್ರತಿ ಕುಟುಂಬದ ಪ್ರತಿ ವ್ಯಕ್ತಿಗೂ ಬೂಸ್ಟರ್ ಕಿಟ್ ವಿತರಣೆ ಮಾಡಲಾಗುತ್ತದೆ. ಇದರಿಂದ ಕೊರೊನಾದಿಂದ ದೂರವಿರಬಹುದು. ಈ ಕಿಟ್ನಲ್ಲಿ ಮೂರು ರೀತಿಯ ಔಷಧಗಳಿವೆ. ಇದನ್ನು ಸೇವಿಸುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ದಿಂದ ದೂರವಿರಬೇಕಾದರೆ, ನಾವು ಮೊದಲು ಆರೋಗ್ಯವಂತರಾಗಿರಬೇಕಿದೆ. ಅದನ್ನು ನಮಗೆ ಆರ್ಯುವೇದ ಒದಗಿಸುತ್ತದೆ ಎಂದು ಹೇಳಿದರು.
ಜುಲೈ 29 ರಂದು ಔಷಧ ಸಿದ್ದಪಡಿಸಿದ ಡಾ. ಗಿರಿಧರ್ ಕಜೆಯವರ ಮೂಲಕ ವಿತರಿಸಲಾಗುತ್ತದೆ. ಕುವೆಂಪು ರಂಗಮಂದಿರದಲ್ಲಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಪ್ರತೀ ಕಿಟ್ಗೆ 500 ರೂ. ವೆಚ್ಚ ತಗುಲಲಿದೆ. ರಿಯಾಯಿತಿ ದರದಲ್ಲಿ ಪಡೆದು ಹಂಚಲಾಗುತ್ತಿದೆ. ಕಿಟ್ ವಿತರಣೆ ಮಾಡಲು ಕೋವಿಡ್ ಸುರಕ್ಷಾ ಪಡೆ ರಚನೆ ಮಾಡಲಾಗಿದೆ. ಕಿಟ್ ಪಡೆಯಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ ಎಂದರು. ಕೋವಿಡ್ ಸುರಕ್ಷಾ ಪಡೆಯ ಕೋಶಾಧಿಕಾರಿ ಡಿ.ಎಸ್. ಅರುಣ್ ಹಾಗೂ ಕೆ.ಈ. ಕಾಂತೇಶ್ ಹಾಜರಿದ್ದರು.