ಶಿವಮೊಗ್ಗ: ನಗರದಲ್ಲಿ ನಾಳೆವರೆಗೆ 144 ಸೆಕ್ಷನ್ ಮುಂದುವರೆಯಲಿದೆ. ಇದರ ಉದ್ದೇಶ ಜನ ಗುಂಪು ಸೇರಬಾರದು ಎಂಬುದಷ್ಟೇ. ಈಗಾಗಲೇ ನಗರ ಸಹಜ ಸ್ಥಿತಿಗೆ ಬಂದಿದೆ. ನಾಳೆ ಮತ್ತೊಮ್ಮೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೂರ್ವ ವಲಯದ ಐಜಿಪಿ ಕೆ. ತ್ಯಾಗರಾಜನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಕು ಇರಿತ ಪ್ರಕರಣದಲ್ಲಿ ಒಟ್ಟು ನಾಲ್ಕು ಜನ ಆರೋಪಿಗಳ ಬಂಧನವಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದರು. ಚಾಕು ಇರಿದ ಆರೋಪಿಗಳು ಎಸ್ಡಿಪಿಐ ಸಂಘಟನೆ ಜೊತೆ ಗುರುತಿಸಿಕೊಂಡಿರುವ ವೈರಲ್ ವಿಡಿಯೋಗಳ ಕುರಿತು ಮಾತನಾಡುತ್ತಾ, ಫೋಟೋ, ವಿಡಿಯೋಗಳು ಸಿಕ್ಕ ಮಾತ್ರಕ್ಕೆ ಹೇಳಲು ಆಗುವುದಿಲ್ಲ. ಅವುಗಳ ಬಗ್ಗೆ ನಾವು ಪರಿಶೀಲನೆ ನಡೆಸಬೇಕು. ಯಾವುದೋ ಒಂದು ವಿಚಾರದಿಂದ ನಾವು ಪೂರ್ಣ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಅದರ ಬಗ್ಗೆ ಚರ್ಚೆಯನ್ನೂ ಮಾಡಲಾಗುವುದಿಲ್ಲ ಎಂದು ಹೇಳಿದರು.
ನಗರದಲ್ಲಿ ಗಣೇಶ ಹಬ್ಬದ ಕುರಿತು ಪ್ರತಿಕ್ರಿಯಿಸಿ, ಗಣೇಶ ಹಬ್ಬ ಶಿವಮೊಗ್ಗದಲ್ಲಿ ಮಾತ್ರ ಸಂಭ್ರಮಿಸುವುದಲ್ಲ. ನಾಡಿನಾದ್ಯಂತ ಆಚರಿಸಲಾಗುವುದು. ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗುತ್ತದೆ. ಅದರಂತೆ ನಗರದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ನಿನ್ನೆಯಷ್ಟೇ ಡಿಸಿಯವರು ಚರ್ಚಿಸಿದ್ದಾರೆ. ಅವರು ಮಂಡಳಿಯವರೊಂದಿಗೆ ಚರ್ಚಿಸಿ ಹಬ್ಬದ ರೂಪುರೇಷೆಯನ್ನು ಸಿದ್ದಪಡಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಆ.20 ರವರೆಗೆ ನಿಷೇಧಾಜ್ಞೆ: ಆರೋಪಿಗಳಿಗೆ ಮತ್ತೆರಡು ದಿನ ಪೊಲೀಸ್ ಕಸ್ಟಡಿ