ಶಿವಮೊಗ್ಗ: ''ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮೊದಲು ಮಧು ಬಂಗಾರಪ್ಪ ಎಂದು ಗೊತ್ತಿಲ್ಲ. ಈಗ ಯಾರು ಅಂತ ಗೊತ್ತಿಲ್ಲ'' ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವ ಮಧು ಬಂಗಾರಪ್ಪ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಇಂದು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೆಡಿಪಿ ಸಭೆ ನಡೆಯಲಿದೆ. ನನಗೆ ಇಂದಿನ ಕೆಡಿಪಿ ಸಭೆಗೆ ಕರೆದಿಲ್ಲ. ಇದರಿಂದ ನಾನು ಆ ಸಭೆಗೆ ಹೋಗುವುದಿಲ್ಲ'' ಎಂದರು.
''ನನ್ನದು ಯಾವುದೇ ಸಮಸ್ಯೆ ಇಲ್ಲ. ದೆಹಲಿ ನಾಯಕರು ನಮಗೆ ಗೊತ್ತಿಲ್ಲ. ನಮಗೆ ರಾಜ್ಯದ ನಾಯಕರು ಮಾತ್ರ ಗೊತ್ತು. ನಾನು ಕ್ಷೇತ್ರದ ಜನರಿಂದ ಗೆದ್ದಿದ್ದು, ಯಾರಿಂದಲೂ ಗೆದ್ದಿಲ್ಲ'' ಎಂದ ಅವರು, ''ನನಗೆ ಇಷ್ಟು ದಿನ ಮಂತ್ರಿ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ಇಲ್ಲ. ಆದರೆ, ನನಗೂ ಮಂತ್ರಿ ಸ್ಥಾನ ನೀಡಿ ಎಂಬುದು ನನ್ನ ಬೇಡಿಕೆ. ನಾನು ಯಾವುದೇ ಭಿನ್ನಮತ ಮಾಡಲ್ಲ. ನಾನು ಹೆದರಿಕೊಂಡು ಹೋಗಲು ಕುಮಾರ ಬಂಗಾರಪ್ಪ ಅಲ್ಲ. ನಾನು ಗೋಪಾಲಕೃಷ್ಣ ಬೇಳೂರು''ಎಂದು ಹೇಳಿದರು.
ಬಿಜೆಪಿ ಬರ ಅಧ್ಯಯನ ಪ್ರವಾಸಕ್ಕೆ ಕಿಡಿ: ''ಬಿಜೆಪಿ ನಾಯಕರು ಬರ ಅಧ್ಯಯನ ಮಾಡಲು ಹೊರಟಿರುವುದು ಸಂತೋಷ. ಆದರೆ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಿಎಂ ಬರಕ್ಕಾಗಿ ಹಣ ಬಿಡುಗಡೆ ಮಾಡಿದ್ದಾರೆ. ವಿಪಕ್ಷ ನಾಯಕರಿಲ್ಲದೇ ಬರ ಅಧ್ಯಯನಕ್ಕೆ ಹೊರಟಿದ್ದು ಸರಿಯಲ್ಲ. ಹಿಂದೆ, ಪ್ರವಾಹ ಬಂದಾಗ ನೀವು ಸಮೀಕ್ಷೆ ಮಾಡಿ ಕಳುಹಿಸಿದ ವರದಿಗೆ ಹಣ ಬಂದಿತ್ತೆ ಎಂದು ಪ್ರಶ್ನೆ ಮಾಡಿದರು. ನೀವು ಈಶ್ವರಪ್ಪ, ಕಟೀಲು ಕರೆದುಕೊಂಡು ಹೋಗುತ್ತಿರುವುದು ಸರಿಯಲ್ಲ. ಕಳೆದ ಭಾರಿ ಪ್ರವಾಹದಿಂದ ಕುಸಿದಿರುವ ಮನೆಗಳಿಗೆ ಪರಿಹಾರದ ಹಣ ಇನ್ನೂ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಬರ ವೀಕ್ಷಣೆ ಮಾಡಬೇಕು'' ಎಂದು ಒತ್ತಾಯಿಸಿದರು.
ಶಾಸಕರನ್ನು ಕೂಡಿ ಹಾಕಿಕೊಂಡಿದ್ದ ಹೆಚ್ಡಿಕೆ: ''ಜೆಡಿಎಸ್ ಹಾಗೂ ಬಿಜೆಪಿಯವರು ಜಂಟಿಯಾಗಿ ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಎರಡು ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಕುಮಾರಸ್ವಾಮಿ ಅವರು, ತಮ್ಮ ಶಾಸಕರನ್ನು ರೆಸಾರ್ಟ್ನಲ್ಲಿ ಕೂಡಿಹಾಕಿಕೊಳ್ಳುತ್ತಿದ್ದಾರೆ. ಆದರೂ ಸಹ ಅವರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಬಿಜೆಪಿ ಶಾಸಕರು ಸಹ ಬರುತ್ತಿದ್ದಾರೆ. ಕುಮಾರಸ್ವಾಮಿ ಅವರು ಮೋದಿ ಬಳಿ ಕಾಂಗ್ರೆಸ್ ಮುಗಿಸುತ್ತೇನೆ ಎಂದು ಹೇಳಿ ಬಂದು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ'' ಎಂದು ಟೀಕಿಸಿದರು.
''ಈಶ್ವರಪ್ಪ, ಕಟೀಲು ಕಟ್ಟಿಕೊಂಡು ಹೋದ್ರೆ ಮುಂದೆ, 35 ಸೀಟಿಗೆ ಬರ್ತಿರಾ. ಈಶ್ವರಪ್ಪನವರಿಗೆ ಶಿವಮೊಗ್ಗದಲ್ಲಿಯೇ ನೆಲೆ ಇಲ್ಲ. ಮಗನಿಗಾಗಿ ಹಾವೇರಿಗೆ ಹೋಗಿದ್ದರು. ಬಿಎಸ್ವೈಗೆ ಬದ್ಧತೆ ಇದ್ರೆ, ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ. ಬಿಜೆಪಿಯವರು ವಿರೋಧ ಪಕ್ಷದ ನಾಯಕರಾಗಿ ನೀವು ಏನ್ ಮಾಡುತ್ತಿದ್ದೀರಿ'' ಎಂದು ಪ್ರಶ್ನಿಸಿದರು.
''ಪಿಎಸ್ಐ ಹಗರಣವನ್ನು ನೀವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ರಿ. ಕಿಂಗ್ ಪಿನ್ ಆರ್.ಡಿ. ಪಾಟೀಲ್ ಬಂಧಿಸಬೇಕು ಎಂದು ನಮ್ಮ ಸಿಎಂಗೆ ನಾನು ಒತ್ತಾಯ ಮಾಡುತ್ತೇನೆ. ಈ ಪ್ರಕರಣದ ತನಿಖೆಯನ್ನು ಬೇಗ ಮುಗಿಸಬೇಕು'' ಎಂದು ಆಗ್ರಹಿಸಿದರು. ಡಿಸಿಸಿ ಬ್ಯಾಂಕ್ ಹಿಂದೆ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಇದರ ಹಿಂದೆ ಸಂಸದ ರಾಘವೇಂದ್ರ ಇದ್ದಾರೆ. ನಮ್ಮದೇ ಸರ್ಕಾರ ತನಿಖೆ ಮಾಡಬೇಕು'' ಒತ್ತಾಯಿಸಿದರು.
''ಲೋಕಸಭೆಗೆ ಸ್ಪರ್ಧೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ನಾನು ಲೋಕಸಭೆ ಕ್ಷೇತ್ರದ ಪ್ರಬಲ ಆಕಾಂಕ್ಷಿ. ಎಂಎಲ್ಎ ಚುನಾವಣೆಗೆ ಸರ್ವೆ ಮಾಡಿದ ಹಾಗೆಯೇ ಲೋಕಸಭೆ ಚುನಾವಣೆಗೂ ಸರ್ವೆ ಮಾಡಿ ಟಿಕೆಟ್ ಕೊಡಿ. ನಾನು ಹಾಗೂ ಗೀತಾ ಶಿವರಾಜ್ಕುಮಾರ್, ಸುಂದರೇಶ್ ಹಾಗೂ ಕಿಮ್ಮನೆ ರತ್ನಾಕರ್ ನಿಲ್ಲಲಿ. ಡಿಸಿಎಂ ಶಿವಕುಮಾರ್ ಸಿಎಂ ಮಾಡೋದು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು'' ಎಂದು ಬೇಳೂರು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರವೇಶ ಬೇಡ, ಹೊರ ವರ್ತುಲ ರಸ್ತೆ ಮೂಲಕವೇ ಸಾಗಲಿ- ಸಾರ್ವಜನಿಕರ ಆಗ್ರಹ