ಶಿವಮೊಗ್ಗ : ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಹಣ್ಣುಗಳನ್ನು ಬೆಳೆದ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಪರಿತಪಿಸುತ್ತಿದ್ದಾರೆ. ಈಗಾಗಲೇ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಬೇಕಾದ ಕಲ್ಲಂಗಡಿ ಹಾಗೂ ಫೈನಾಪಲ್ ಈಗ ಮಣ್ಣು ಪಾಲಾಗುತ್ತಿದೆ.
ಶಿವಮೊಗ್ಗ ತಾಲೂಕು ಹುರಳಿಹಳ್ಳಿಯಲ್ಲಿ ಜೋಸೆಫ್ ಎಂಬ ರೈತ ತನ್ನ 15 ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದರು. ಇದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಈಗ ಆಕಾಶ ನೋಡುವಂತೆ ಆಗಿದೆ. ಜೋಸೆಫ್ ಅವರು ಬೆಳೆದ ತಳಿಯು 70 ದಿನದ ಒಳಗೆ ಕಟ್ ಆಗಿ ಮಾರುಕಟ್ಟೆಯಲ್ಲಿ ಇರಬೇಕಿತ್ತು. ಆದರೆ, ಈಗ ಅವಧಿ ಮುಗಿದಿರುವ ಕಾರಣ ಹಣ್ಣುಗಳು ಕೊಳೆತು ಹೋಗುತ್ತಿವೆ.
ಲಾಕ್‌ಡೌನ್ ಆಗೋಕು ಮುಂಚೆ ಇವರು ಬೆಳೆದ ಎಲ್ಲಾ ಹಣ್ಣುಗಳನ್ನು ವ್ಯಾಪಾರಿಗಳು ತೆಗೆದುಕೊಳ್ಳುವುದಾಗಿ ಹೇಳಿ ಮಾತು ಕಥೆಯಾಗಿತ್ತು. ಆದರೆ, ಲಾರಿ ಕಳುಹಿಸುವಷ್ಟರಲ್ಲಿ ಲಾಕ್‌ಡೌನ್ ಆದ ಕಾರಣ ಯಾವ ಲಾರಿನೂ ಬರಲಿಲ್ಲ. ಇದರಿಂದ ಕಲ್ಲಂಗಡಿ ಬಿಸಿಲಿಗೆ ಒಡೆದು ಮಣ್ಣು ಪಾಲಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತ ನಮಗೆ ಸಹಾಯ ಮಾಡದೆ ಹೋದ್ರೆ ವಿಷ ಕುಡಿಯಬೇಕಾಗುತ್ತದೆ ಎಂದಿದ್ದಾರೆ.
ಫೈನಾಪಲ್ ಕಥೆ : ಜಿಲ್ಲೆಯ ಸಾಗರ ಹಾಗೂ ಸೊರಬ ಭಾಗದಲ್ಲಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ಫೈನಾಪಲ್‌ನ ಬೆಳೆಯುತ್ತಾರೆ. ರೈತರು 20 ರಿಂದ 30 ಎಕರೆಯಲ್ಲಿ ಫೈನಾಪಲ್ ಬೆಳೆಯುತ್ತಾರೆ. ಈಗಾಗಲೇ ಈ ಹಣ್ಣುಗಳು ಸಹ ಕಟಾವಿಗೆ ಬಂದಿವೆ. ಈ ಹಣ್ಣುಗಳನ್ನು ನಾಲ್ಕೈದು ದಿನಗಳಲ್ಲಿ ಕಟಾವು ಮಾಡಿ ಮಾರಾಟಕ್ಕೆ ಕಳುಹಿಸದೆ ಇದ್ದರೆ ಇವೂ ಸಹ ಕೊಳೆತು ಹೋಗುವ ಭಯ ರೈತರನ್ನ ಕಾಡುತ್ತಿದೆ.
ಈ ಭಾಗದ ರೈತರು ಕಳೆದ 20 ವರ್ಷಗಳಿಂದ ಈ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಶಿವಕುಮಾರ್ 25 ಎಕರೆ, ಸದಾನಂದ 10 ಎಕರೆ, ಶ್ರೀಧರ್ 5 ಎಕರೆ ಹೀಗೆ ಸಾಕಷ್ಟು ರೈತರು ಹಣ್ಣನ್ನು ಬೆಳೆಯುತ್ತಿದ್ದಾರೆ. ಫೈನಾಪಲ್‌ನ ಪಂಜಾಬ್, ಜಮ್ಮು, ಹರಿಯಾಣ ಹೀಗೆ ಉತ್ತರ ಭಾರತದ ಕಂಪನಿಗಳು ಖರೀದಿಗೆ ಬರುತ್ತಿದ್ದವು. ಕಂಪನಿಗಳು ಫೈನಾಪಲ್‌ನ ಕಾಯಿ ಇರುವಾಗಲೇ ಖರೀದಿ ಮಾಡಿ ತೆಗದುಕೊಂಡು ಹೋಗುತ್ತಿದ್ದವು. ಈಗ ಲಾಕ್‌ಡೌನ್‌ನಿಂದ ಯಾರೂ ಎಲ್ಲೂ ಓಡಾಡದ ಸ್ಥಿತಿ ಬಂದಿದೆ. ಇದರಿಂದ ಕೋಟ್ಯಾಂತರ ರೂ. ಬೆಳೆ ನಾಶವಾಗುವ ಭಯದಲ್ಲಿ ರೈತರಿದ್ದಾರೆ. ಈಗ ಸಿಎಂ ಹಣ್ಣು, ತರಕಾರಿ ಮಾರಾಟಕ್ಕೆ, ಸಾಗಾಟಕ್ಕೆ ಅನುಮತಿ ನೀಡಿರುವುದರಿಂದ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.