ಶಿವಮೊಗ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಪ್ರಬಲವಾಗಿಸಲು ಹಾಗೂ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲಲು ಯುವ ಕಾಂಗ್ರೆಸ್ನಿಂದ ಶ್ರಮಿಸಲಾಗುವುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಹೆಚ್.ಪಿ.ಗಿರೀಶ್ ಹೇಳಿದರು.
ಓದಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಘಟಿಕೋತ್ಸವ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ನಾನು 2300 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. 2002 ಮತ ಪಡೆದ ಮಧುಸೂದನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದರ ಜೊತೆಗೆ ಎಸ್ಸಿ ಮೀಸಲಾತಿಯಲ್ಲಿ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್, ಅರುಣ್ ಕುಮಾರ್, ಖಾಲಿಮ್ ಅಹಮ್ಮದ್, ಗಿರೀಶ್ ಎನ್. ಆಯ್ಕೆಯಾಗಿದ್ದಾರೆ ಎಂದರು.
ಇದಲ್ಲದೇ ಬ್ಲಾಕ್ ಸಮಿತಿಗಳಲ್ಲೂ ಕೂಡ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಯುವಕರ ತಂಡ ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲವಾಗಲಿದೆ. ಆಯ್ಕೆಯಾದವರೆಲ್ಲರೂ ಅತ್ಯಂತ ಬಡತನದಲ್ಲಿಯೇ ಬೆಳೆದು ಬಂದವರು. ಪಕ್ಷಕ್ಕಾಗಿ ಈಗಾಗಲೇ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದವರು. ನೂತನವಾಗಿ ಆಯ್ಕೆಯಾಗಿರುವ ನಮ್ಮ ತಂಡ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಪಣ ತೊಡಲಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಿವಾಳಿತನ ಎದ್ದು ಕಾಣುತ್ತಿದೆ. ಕೋಮುವಾದದ ಜೊತೆಗೆ ಮಂಕು ಬೂದಿ ಎರಚುತ್ತಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತಾಳುತ್ತಿದೆ ಎಂದು ದೂರಿದರು.