ಶಿವಮೊಗ್ಗ: ಉಡುಗಣಿ, ತಾಳಗುಂದ, ಹೊಸೂರು ಏತ ನೀರಾವರಿ ಯೋಜನೆ ಭರದಿಂದ ಸಾಗುತ್ತಿದ್ದು, ತಮ್ಮ ಊರುಗಳಿಗೆ ನೀರು ಒದಗಿಸುವ ನೀರಾವರಿ ಯೋಜನೆ ಕಾಮಗಾರಿಯನ್ನು ಶಿಕಾರಿಪುರ ತಾಲೂಕಿನ ಜನರು ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪರ ತವರು ಶಿಕಾರಿಪುರ ತಾಲೂಕು ಎಂದರೆ ಅದು ಬರಪೀಡಿತ ತಾಲೂಕು. ಇಲ್ಲಿ ಪ್ರತಿ ವರ್ಷ ರೈತರು ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವಂತಾಗಿತ್ತು. ಹೀಗಾಗಿ ಈ ಹಿಂದಿನಿಂದಲೂ ಶಿಕಾರಿಪುರ ತಾಲೂಕಿಗೆ ನೀರಾವರಿ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿತ್ತು. ರೈತರ ಕಷ್ಟವನ್ನು ಮನಗಂಡಿದ್ದ ಸಿಎಂ ಯಡಿಯೂರಪ್ಪ ರೈತರ ಜಮೀನುಗಳಿಗೆ ನೀರು ಒದಗಿಸಲು ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದ್ದರು.
ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹಾಗೂ ತೋಗರ್ಸಿ ಈ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸಲು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಟ್ನಹಳ್ಳಿ ಬಳಿ ಜಾಕ್ವೆಲ್ ನಿರ್ಮಿಸಿ ಅಲ್ಲಿಂದ ನೀರನ್ನು ಪಂಪ್ ಮಾಡಿ ಶಿಕಾರಿಪುರ ತಾಲೂಕಿನ 186 ಕೆರೆಗಳಿಗೆ ಒಟ್ಟಾರೆ 1.5 ಟಿಎಂಸಿ ನೀರನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಈ ಕೆರೆಗಳನ್ನು ತುಂಬಿಸಿ ಶಿಕಾರಿಪುರ ತಾಲೂಕಿನ 18 ಸಾವಿರ ಎಕರೆ ಜಮೀನಿಗೆ ನೀರು ಒದಗಿಸುವುದು ಸರ್ಕಾರದ ಗುರಿಯಾಗಿದೆ. ಈಗಾಗಲೇ ಈ ಕಾಮಗಾರಿ ಆರಂಭಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.