ಶಿವಮೊಗ್ಗ: ಹೊಸನಗರದ ಫುಡ್ ಇನ್ಸ್ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಸೇರಿದಂತೆ ಏಳು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಸನಗರದ ಫುಡ್ ಇನ್ಸ್ಪೆಕ್ಟರ್ ದತ್ತಾತ್ರೇಯ ತುಂಗಾ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇವರ ಆತ್ಮಹತ್ಯೆಗೆ ಹೊಸನಗರ ತಹಶೀಲ್ದಾರ್ ಶ್ರೀಧರಮೂರ್ತಿ ಸೇರಿದಂತೆ ಆನಂದ್ ಕಾರ್ವಿ, ನಾಗೇಂದ್ರ, ವಿಠಲ್, ಮುರುಗೇಶ್, ಶಶಿಕಲಾ, ವನಜಾಕ್ಷಿ ಎಂಬ ಏಳು ಜನ ಕಾರಣ ಎಂದು ಆರೋಪಿಸಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದತ್ತಾತ್ರೇಯರ ಪತ್ನಿ ಅನುಸೂಯ ದೂರು ನೀಡಿದ್ದಾರೆ. ಅಲ್ಲದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಅವರು ಕಳೆದ ವರ್ಷ ನಗರ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ದತ್ತಾತ್ರೇಯ ಇತ್ತಿಚೇಗಷ್ಟೆ ಫುಡ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ್ದರು. ಕಂದಾಯ ನಿರೀಕ್ಷಕರಾಗಿದ್ದಾಗ ಇವರ ಮೇಲೆ ಎರಡು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣವನ್ನು ಖುಲಾಸೆ ಮಾಡಲು ಆರು ಜನರ ಬಳಿ ತಹಶೀಲ್ದಾರ್ ಹಣಕ್ಕಾಗಿ ಹೇಳಿ ಕಳುಹಿಸುತ್ತಿದ್ದರಂತೆ. ಇದರಿಂದ ನೊಂದು ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರ ಬಳಿ ಮಾತನಾಡಿಕೊಂಡು ಬರುವುದಾಗಿ ಹೋಗಿದ್ದ ದತ್ತಾತ್ರೇಯ, ಪತ್ನಿಗೆ ಫೋನ್ ಮಾಡಿ ನಾನು ತೀರ್ಥಹಳ್ಳಿಗೆ ಹೋಗಿಲ್ಲ. ನಾನು ಮುಡುಬ ಬಳಿ ಇದ್ದೇನೆ. ನೀವು ಬನ್ನಿ ಎಂದು ಹೇಳಿ ಬರುವುದರೊಳಗೆ ಶವವಾಗಿ ನದಿಯಲ್ಲಿ ಪತ್ತೆಯಾಗಿದ್ದರು.