ಶಿವಮೊಗ್ಗ: ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಹೊಸಗುಂದ ಉತ್ಸವ ಹಾಗೂ ಲಕ್ಷ ದೀಪೋತ್ಸವದ ಪೋಸ್ಟರ್ನ್ನು ಇಂದು ಬಿಡುಗಡೆ ಗೊಳಿಸಲಾಯಿತು.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಟ್ರಸ್ಟ್ನ ಸಂಸ್ಥಾಪಕರು ಮತ್ತು ಮಾನ್ಯೇಜಿಂಗ್ ಟ್ರಸ್ಟಿ ಸಿ.ಎಂ.ಎನ್ ಶಾಸ್ತ್ರಿ ಮಾತನಾಡಿ, ಹಂಪಿ ಉತ್ಸವದ ಮಾದರಿಯಲ್ಲಿ ಈ ಹೊಸಗುಂದ ಉತ್ಸವವನ್ನು ಆಚರಿಸಲಾಗುತ್ತಿದೆ. ನ.16ರಿಂದ18ರವರೆಗೆ ಸಾಗರ ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 1200 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಕಾರ್ಯಕ್ರಮದ ಕುರಿತ ವಿವರ:
ನ.16ರಂದು ಶಿಥಿಲಾವಸ್ಥೆಯ ದೇಗುಲಗಳು ಮತ್ತೆ ಮೈದಳೆಯವ ಕುರಿತು ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ವಿಚಾರ ಸಂಕಿರಣ ನಡೆಯಲಿದೆ. ಪ್ರಾಚೀನ ದೇಗುಲಗಳ ಛಾಯಾಚಿತ್ರ ಪ್ರದರ್ಶನ, ಹೊಸಗುಂದದ ಪಕ್ಷಿನೋಟ ಕುರಿತು ಸಂಶೋಧಕರ ಅಭಿಪ್ರಾಯ ಮತ್ತು ವಿಚಾರ ವಿನಿಮಯ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ನಿವೃತ್ತ ನಿರ್ದೇಶಕರಾದ ಡಾ.ಸಿದ್ದನಗೌಡರ್, ಡಾ.ಎಸ್,ಜಿ ಸಾಮಕ್ ಭಾಗವವಹಿಸಲಿದ್ದಾರೆ ಎಂದರು.
ನ.17ರಂದು ಸಾವಯವ ಕೃಷಿ, ಬದುಕು ಕುರಿತ ವಿಚಾರ ವಿನಿಮಯ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಮೇರಿಕಾದ ಮೌಂಟೇನ್ ರೋಸ್ ಹರ್ಬ್ಸ್ ಸಿಓಓ ಜೆನ್ನಿಫರ್ ಜರ‍್ರಿಟ್ ಉದ್ಘಾಟಿಸಲಿದ್ದಾರೆ. ಜೀವ ಚೈತನ್ಯ ಕೃಷಿ ಕುರಿತು ಬಯೋ ಡೈನಾಮಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷರಾದ ಡಾ.ಸಂದೀಪ್ ಕಾಮತ್ ಹಾಗೂ ಎಲ್ಲರ ಒಳಿತಿಗಾಗಿ ಸಾವಯವ ಕೃಷಿ ಬಗ್ಗೆ ಜಯರಾಂ ಹೆಚ್.ಆರ್ ಮತ್ತು ಶೂನ್ಯ ಬಂಡವಾಳದ ಸಹಜ ಕೃಷಿ ಹಾಗೂ ಕೃಷಿಯಲ್ಲಿ ಅಗ್ನಿಹೋತ್ರದ ಪಾತ್ರದ ಬಗ್ಗೆ ಪ್ರಗತಿ ಪರ ರೈತ ಹರ್ಷವರ್ಧನ್ ಸಿ.ಜೆ ವಿಚಾರ ಮಂಡಿಸಲಿದ್ದಾರೆ ಎಂದರು.
ಅದೇ ದಿನ ಸಂಜೆ ನಟಿ, ನಿರೂಪಕಿ ಅನುಶ್ರೀ ನೇತೃತ್ವದಲ್ಲಿ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕರಾದ ಹನುಮಂತ, ಚೆನ್ನಪ್ಪ, ಸುಹಾನ, ಸುನೀಲ್, ಪೃಥ್ವಿ ಭಟ್, ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ಸುಮಧುರ ಸಂಗೀತ ಸಂಜೆ ನಡೆಯಲಿದೆ ಎಂದರು.
ನ.18 ರಂದು ಸಸ್ಯ ಸಂಪತ್ತಿನ ಅರಿವು ಮೂಡಿಸಲು ಪರಿಸರ ಪ್ರವಾಸ, ಸಂಜೆ ಜಾನಪದ ಸಂಭ್ರಮ, ನಂತರ ಆನೂರು ಅನಂತಕಷ್ಣ ಶರ್ಮ ಮತ್ತು ಸ್ಯಾಕ್ಸೋಫೋನ್ ಖ್ಯಾತಿಯ ಶ್ರೀಧರ್ ರಿಂದ ವಾದ್ಯ ಸಂಗೀತ ನಂತರ ಯಕ್ಷಗಾನ ನಡೆಯಲಿದೆ. ಅಂದು ಸಂಜೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಣ್ಣೂರು ಡಾಕಪ್ಪ, ಬಸಪ್ಪಗೌಡ್ರು, ರವಿ, ಗಾಜನೂರ ಗಣೇಶ್ ಮತ್ತಿತರರು ಇದ್ದರು.