ಶಿವಮೊಗ್ಗ: ''ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾನಿಲಯದಲ್ಲಿ ಜುಲೈ 21ರಂದು ಜರುಗಲಿರುವ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ತಿಳಿಸಿದರು.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಾಡು ಕಂಡ ಪ್ರಬುದ್ದ ರಾಜಕಾರಣಿ, ಹೋರಾಟಗಾರರು ಹಾಗೂ ನಮ್ಮ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಕಾರಣಿಕರ್ತರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿರುವುದು ನಮಗೆಲ್ಲ ಸಂತೋಷವಾಗಿದೆ'' ಎಂದರು.
''ಕೃಷಿ ವಿವಿಯಿಂದ ಮೂವರ ಹೆಸರನ್ನು ನಾವು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿದ್ದೆವು. ಇಂದು ರಾಜ್ಯಪಾಲರ ಕಚೇರಿಯಿಂದ ಬಿ.ಎಸ್. ಯಡಿಯೂರಪ್ಪಗೆ ಅವರ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ಸಂದೇಶ ಕಳುಹಿಸಿದ್ದಾರೆ. ನಾಳೆ ಘಟಿಕೋತ್ಸವ ಕಾರ್ಯಕ್ರಮ ಸಂಜೆ 4 ಗಂಟೆಗೆ ಸಾಗರ ತಾಲೂಕು ಇರುವಕ್ಕಿಯ ಕೃಷಿ ವಿವಿಯ ಆವರಣದಲ್ಲಿ ನಡೆಯಲಿದೆ. ಘಟಿಕೋತ್ಸವದಲ್ಲಿ ವಿಶ್ವ ವಿದ್ಯಾಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭೆ ಸದಸ್ಯ ಡಾ.ವಿರೇಂದ್ರ ಹೆಗ್ಗಡೆ ಅವರು ಭಾಗವಹಿಸಲಿದ್ದಾರೆ. ಇದರಲ್ಲಿ ಘಟಿಕೋತ್ಸವದ ಭಾಷಣವನ್ನು ಡಾ.ವಿರೇಂದ್ರ ಹೆಗ್ಗಡೆ ಅವರು ಮಾಡಲಿದ್ದಾರೆ'' ಎಂದು ಅವರು ತಿಳಿಸಿದರು.
''ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡಿದ 409 ಸ್ನಾತಕ ಪದವೀಧರರು ಘಟಿಕೋತ್ಸವದಲ್ಲಿ ಪದವಿಗಳನ್ನು ಸ್ವೀಕಾರ ಮಾಡಲಿದ್ದಾರೆ. ಕೃಷಿ, ತೋಟಗಾರಿಕೆ, ಅರಣ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ 101 ವಿದ್ಯಾರ್ಥಿಗಳಿಗೆ ಪದವಿ ಮತ್ತು 23 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್ಡಿ, ರ‍್ಯಾಂಕ್ ಪಡೆದ 29 ವಿದ್ಯಾರ್ಥಿಗಳಿಗೆ ಒಟ್ಟು 37 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ'' ಎಂದರು.
ವಿವಿಯಿಂದ ಎರಡನೇ ಗೌರವ ಡಾಕ್ಟರೇಟ್: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿವಿಯಿಂದ ಈಗ ಎರಡನೇ ಭಾರಿ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ವಾಕ್ಸಿನ್ ಕಂಡು ಹಿಡಿದ ಹೈದರಬಾದ್ ನ ಕೃಷ್ಣ ಯಲ್ಲಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ಈ ಬಾರಿ ಯಡಿಯೂರಪ್ಪ ಅವರು ರೈತರ ಪರವಾಗಿ ನಡೆಸಿದ ಹೋರಾಟ ಹಾಗೂ ಕೃಷಿ ಬಜೆಟ್ ಮಂಡನೆಗಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.
ಇದನ್ನೂ ಓದಿ: ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥೆ.. ಸ್ವಂತ ಮಗುವಿನ ರೀತಿ ಮರಿಯಾನೆ ಸಲಹುತ್ತಿರುವ ಕಾವಾಡಿ ದಂಪತಿ