ಶಿವಮೊಗ್ಗ: ಆಟೊದಲ್ಲಿ ಬಿಟ್ಟು ಹೋಗಿದ್ದ ಸುಮಾರು 40 ಗ್ರಾಂ ಚಿನ್ನಾಭರಣಗಳನ್ನು ಮಾಲೀಕರಿಗೆ ವಾಪಸ್ ನೀಡಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ. ಶನಿವಾರ ರಾತ್ರಿ ರಟ್ಟೆಹಳ್ಳಿಯ ನಿವಾಸಿ ಶಹನಾಜ್ ಬಾನು ಎಂಬುವರು ಶಿವಮೊಗ್ಗದ ಪೇಟೆಯಿಂದ ಟಿಪ್ಪು ನಗರ 7 ನೇ ಕ್ರಾಸ್ಗೆ ಮೊಹಮ್ಮದ್ ಗೌಸ್ ಅವರ ಆಟೋದಲ್ಲಿ ಪ್ರಯಾಣಿಸಿದ್ದರು.
ನಿನ್ನೆ ಸಂಜೆ ಆಟೋ ಸ್ವಚ್ಛಗೊಳಿಸುವಾಗ ಆಭರಣದ ಚೀಲ ಪತ್ತೆಯಾಗಿದೆ. ತಕ್ಷಣ ಆಭರಣದ ಜೊತೆ ಹೋಗಿ ಶಹನಾಬ್ ಬಾನು ಅವರನ್ನು ಹುಡುಕಿ ಅವರಿಗೆ ಮಾಹಿತಿ ತಿಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಅವರ ಸಮ್ಮುಖದಲ್ಲಿ ಒಡವೆಗಳನ್ನು ವಾಪಸ್ ನೀಡಿದ್ದಾರೆ. ಆಭರಣಗಳನ್ನು ವಾಪಸ್ ಮಾಡಿದ ಗೌಸ್ ಅವರಿಗೆ ಪೊಲೀಸ್ ಇಲಾಖೆಯಿಂದ ಅಭಿನಂದನ ಪತ್ರವನ್ನು ನೀಡಿ ಗೌರವಿಸಲಾಗಿದೆ.
'ನಮ್ಮ ಒಡವೆ ವಾಪಸ್ ಸಿಕ್ಕಿದ್ದು, ನಮಗೆ ಸಂತೋಷವನ್ನುಂಟು ಮಾಡಿದೆ. ಅವರಿಗೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು, ನಮಗಂತೂ ತುಂಬ ಸಂತೋಷವಾಗಿದೆ' ಎನ್ನುತ್ತಾರೆ ಶಹತಾಜ್ ಬಾನು. 'ನಮ್ಮ ಆಟೋದಲ್ಲಿ ಸಿಕ್ಕ ಒಡವೆಯನ್ನು ವಾರಸುದಾರರಿಗೆ ವಾಪಸ್ ನೀಡಿದ್ದು, ನನಗಂತೂ ತುಂಬ ಸಂತೋಷವಾಗಿದೆ' ಎನ್ನುತ್ತಾರೆ ಆಟೋ ಚಾಲಕ ಮೊಹಮ್ಮದ್ ಗೌಸ್.
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಮೊಹಮ್ಮದ್ ಗೌಸ್ ಅವರಿಗೆ ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಅಭಿನಂದನೆ ಸಲ್ಲಿಸಿದೆ.
ಇದನ್ನೂ ಓದಿ : ಗಣಪತಿ ಮೂರ್ತಿಗೆ ಮುಸ್ಲಿಂ ಬಾಂಧವರಿಂದ ಸೇಬಿನ ಹಾರ.. ಸಾಮರಸ್ಯಕ್ಕೆ ಸಾಕ್ಷಿಯಾದ ಹಾವೇರಿ