ಶಿವಮೊಗ್ಗ: ತೀರ್ಥಹಳ್ಳಿಯ ಬಾಲಕಿ ನಂದಿತಾ ಪ್ರಕರಣದಲ್ಲಿ ಈಗಾಗಲೇ ಸಾಕ್ಷ್ಯಗಳು ಸತ್ತು ಹೋಗಿವೆ. ಈಗ ಸಿಬಿಐಗೆ ನೀಡಿದರೆ ಏನು ಪ್ರಯೋಜನ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ನಂದಿತಾ ಸಾವಿನ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಇತ್ತಿಚೇಗೆ ಆಗ್ರಹಿಸಿದ್ದರು.
ಈಗ ನಾವು ಒಂದು ಹಂತಕ್ಕೆ ಬೆಳೆದಿದ್ದೇವೆ. ಇಂತಹ ಸಮಯದಲ್ಲಿ ನಾನು ಅವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎನ್ನುತ್ತಲೇ, ಈಗ ನಂದಿತಾ ಪ್ರಕರಣವನ್ನು ಕಿಮ್ಮನೆ ರತ್ನಾಕರ್ ಅವರು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೆ ಅವರೇ ಸಚಿವರಾಗಿದ್ದಾಗ ನನ್ನನ್ನು ಸೇರಿದಂತೆ ಸುಮಾರು 300 ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರು.
ಹಿಂದೆ ಅವರು ಸಚಿವರಾಗಿದ್ದಾಗ ಸಿಒಡಿಗೆ ವಹಿಸಿದ್ಧರು. ಆಗ ಬಿ ರಿಪೋರ್ಟ್ ಹಾಕಲಾಗಿದೆ. ಈಗ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿ ಸಿಬಿಐಗೆ ನೀಡಿ ಎನ್ನುತ್ತಿರುವುದು ಸರಿಯಲ್ಲ. ನ್ಯಾಯಯುತವಾದ ತನಿಖೆ ನಡೆಸಿದರೆ, ಅವರ ವೋಟ್ ಬ್ಯಾಂಕ್ ಹಾಳಾಗುತ್ತದೆ ಎಂದು ಸುಮ್ಮನಿದ್ದರು. ಆದರೆ, ಈಗ ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ. ಈಗ ಸಾಕ್ಷ್ಯ ನಾಶವಾಗಿದೆ, ಈಗ ಸಿಬಿಐಗೆ ವಹಿಸಿದರೆ ಏನು ಪ್ರಯೋಜನ ಎಂದರು.
ಅಡಕೆ ಟಾಸ್ಕ್ ಫೋರ್ಸ್ ಅದರ ಪಾಡಿಗೆ ಅದರ ಕೆಲಸ ಮಾಡುತ್ತಿದೆ. ಅಡಕೆ ಕ್ಯಾನ್ಸರ್ ಕಾರಕ ಎಂದು ಸುಪ್ರೀಂಕೋರ್ಟ್‌ನಲ್ಲಿ ಇರುವ ದಾವೆಯ ವಿರುದ್ಧ, ಅಡಕೆಯಲ್ಲಿ ಔಷಧಿಯ ಗುಣಗಳಿದೆ ಎಂದು ತಿಳಿಯಲು ರಾಮಯ್ಯ ಇನ್ಸ್‌ಟಿಟ್ಯೂಟ್‌ನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ಸಂಶೋಧನೆ ಒಂದು ಹಂತಕ್ಕೆ ಬಂದಿದೆ.
ಸರ್ಕಾರಿ ಲ್ಯಾಬ್ಗಳ ವರದಿ ತಡವಾಗಿ ನೀಡುತ್ತವೆ ಎಂಬ ಆರೋಪದ ಮೇಲೆ ರಾಮಯ್ಯ ಇನ್ಸ್ಟಿಟ್ಯೂಟ್ಗೆ ನೀಡಲಾಗಿದೆ ಎಂದರು. ಎನ್ಐಎ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕೆಂದು ಕೇಂದ್ರದ ಪ್ರಯತ್ನ ಮುಂದುವರೆದಿದೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಯತ್ನಾಳ್ ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ನನ್ನ ಸ್ನೇಹಿತರು ಎಂದರು. ಐಪಿಎಸ್ ಅಧಿಕಾರಿ ರವಿ ಚನ್ನಣ್ಣನ್ನವರ್ ವಿರುದ್ಧ ತನಿಖೆ ನಡೆಯುತ್ತಿದೆ ಎಂದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ