ಶಿವಮೊಗ್ಗ: ಮಾಜಿ ಸಚಿವ ಕುಮಾರ ಬಂಗಾರಪ್ಪನವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಯಾವುದೇ ಮಾತುಕತೆ ನಡೆಸಿಲ್ಲ. ಅವರು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದವರು, ಅವರನ್ನು ಹೈಕಮಾಂಡ್ ಮಾತನಾಡಿಸಿ ತೀರ್ಮಾನ ಮಾಡುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಪಕ್ಷ ಸಾಧಕ- ಬಾಧಕವನ್ನು ನೋಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಪಕ್ಷ ಬಿಟ್ಟು ಹೋದವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಧಿಕಾರವನ್ನು ಜಿಲ್ಲಾ ಕಾಂಗ್ರೆಸ್ ಗೆ ನೀಡಿದ್ದಾರೆ. ಆಯನೂರು ಮಂಜುನಾಥ್ ಅವರು ಪಕ್ಷಕ್ಕೆ ಬರುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಯೋಗೀಶ್ ವಿರೋಧ ಮಾಡಿದ್ದರು. ಅದನ್ನು ಕುಳಿತು ಮಾತನಾಡಿ ಬಗೆಹರಿಸುತ್ತೇವೆ ಎಂದರು.
ಲೋಕಸಭೆ ಚುನಾವಣೆಗೆ ತಯಾರಿ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ತಯಾರಿ ಪ್ರಾರಂಭಿಸಿದೆ. ಈಗಾಗಲೇ ಶಿವಮೊಗ್ಗದಿಂದ ಆಯನೂರು ಮಂಜುನಾಥ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಶಿಕಾರಿಪುರದಿಂದ ನಾಗರಾಜ ಗೌಡ ಸೇರಿದಂತೆ ಅವರ ಬೆಂಬಲಿಗರು ಪಕ್ಷವನ್ನು ಸೇರ್ಪಡೆ ಅಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜಯ ಗಳಿಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಪಾಲಿಕೆ ಚುನಾವಣೆಯನ್ನು ನಾವು ಎದುರಿಸಬೇಕಾಗಿದೆ. ಪಕ್ಷಕ್ಕೆ ಬಂದವರು ಸದಸ್ಯತ್ವ ಪಡೆಯಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಶಾಸಕರುಗಳು ಸ್ಪರ್ಧೆ ಮಾಡಿದ ಅಭ್ಯರ್ಥಿಗಳನ್ನು ಒಳಗೊಂಡಂತೆ ನಾವು ಪಕ್ಷವನ್ನು ಗ್ರಾಮ ಮಟ್ಟದಿಂದ ಸಂಘಟಿಸಿ ಲೋಕಸಭಾ ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದೇವೆ. ಎಐಸಿಸಿ ಮತ್ತು ಕೆಪಿಸಿಸಿಯ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಕೋರಬೇಕೆಂದು ತಿಳಿಸಿದೆ. ಅಲ್ಲದೆ ಯಾರಿಗೂ ಯಾವುದೇ ಟಿಕೆಟ್ ಭರವಸೆಯನ್ನು ನೀಡದೆ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ನಾವೆಲ್ಲಾರು ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸಲು ಹೊರಟಿದ್ದೇವೆ ಎಂದರು.
ಉಚ್ಚಾಟನೆ ಆದವರು ಪಕ್ಷ ಸಂಘಟನೆಗೆ ಬಂದಿದ್ದಾರೆ: ಚುನಾವಣಾ ಸಮಯದಲ್ಲಿ ಪಕ್ಷದ್ರೋಹ ಕೆಲಸ ಮಾಡಿದವರನ್ನು ಆರು ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ ಈಗ ಪಕ್ಷ ಸಂಘಟನೆ ಮಾಡುವುದಾಗಿ ಹಾಗೂ ಯಾವುದೇ ಬೇಡಿಕೆ ಇಲ್ಲದೆ ಪಕ್ಷಕ್ಕೆ ಬರುವವರನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದವೆ ಎಂದು ಸೇರ್ಪಡೆಗೊಂಡವರ ಬಗ್ಗೆ ಸ್ಪಷ್ಟನೆ ನೀಡಿದರು. ಇನ್ನೂ ಬಹಳಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಸರ್ಕಾರಕ್ಕೆ ನೂರು ದಿನದ ಸಂಭ್ರಮ: ಪಂಚ ಗ್ಯಾರಂಟಿಗಳ ಅನುಷ್ಠಾನದ ಜೊತೆ ಪಂಚ ಹಗರಣಗಳ ತನಿಖೆಗೆ ಸಮಿತಿ ರಚಿಸಿ ಬಿಜೆಪಿಗೆ ಟಕ್ಕರ್