ಶಿವಮೊಗ್ಗ: ಜಿಲ್ಲೆಯಲ್ಲಿ ಸುಮಾರು 5,500 ಕುಟುಂಬಗಳನ್ನು ನೆರೆಪೀಡಿತರೆಂದು ಗುರುತಿಸಲಾಗಿದೆ. 2,400 ಕುಟುಂಬಗಳಿಗೆ ಈಗಾಗಲೇ ತುರ್ತು ಪರಿಹಾರವಾಗಿ ತಲಾ 10ಸಾವಿರ ರೂಪಾಯಿಯನ್ನ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ 70 ಜಾನುವಾರುಗಳು ಹಾಗೂ 23 ಸಾವಿರ ಕೋಳಿ ಸಾವಿಗೀಡಾಗಿವೆ. ಇವುಗಳ ಮಾಲೀಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಪ್ರವಾಹಕ್ಕೆ ಸಿಲುಕಿ ಜಿಲ್ಲೆಯಲ್ಲಿ 10 ಮಂದಿ ಸಾವಿಗೀಡಾಗಿದ್ದು, ಅವರ ಕುಟುಂಬದವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿದೆ. ಇನ್ನು, ನೀರಿನಲ್ಲಿ ಕೊಚ್ಚಿ ಹೋಗಿರುವ ಇಬ್ಬರ ಮೃತದೇಹಗಳಿಗಾಗಿ ಎನ್‍ಡಿಆರ್‍ಎಫ್ ತಂಡ ಇನ್ನೂ ಶೋಧ ಕಾರ್ಯ ಮುಂದುವರಿಸಿದೆ.
ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. 492 ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿದ್ದು, 3ಸಾವಿರ ಮನೆಗಳು ಭಾಗಶಃ ಹಾನಿಗೀಡಾಗಿವೆ. ಮನೆ ಕಟ್ಟಲು ಕಷ್ಟವಾಗುವವರಿಗೆ ಜಿಲ್ಲಾಡಳಿತದಿಂದ ಮನೆ ನಿರ್ಮಿಸಿಕೊಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ನೆರೆ ಸಂದರ್ಭದಲ್ಲಿ ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ಸಾರ್ವಜನಿಕರು, ಅನೇಕ ಸಂಘ ಸಂಸ್ಥೆಗಳು ಸಕ್ರಿಯವಾಗಿ ಕೈಜೋಡಿಸಿದ್ದರು. ಎಲ್ಲರ ಸಹಕಾರದಿಂದಾಗಿ ರಕ್ಷಣೆ ಹಾಗೂ ಪರಿಹಾರ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಿದೆ.