ಶಿವಮೊಗ್ಗ: ಚಪ್ಪಾಳೆ ಬೇಡ ಸೌಲಭ್ಯ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವೈದ್ಯಕೀಯ ಶಿಕ್ಷಣ ಇಲಾಖೆಯ ಹಾಗೂ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕೊರೊನಾ ವಾರಿಯರ್ಸ್ ಎಂದು ಚಪ್ಪಾಳೆ ತಟ್ಟುವುದು ಬೇಡ, ಬದಲಿಗೆ ಸೂಕ್ತ ಸೌಲಭ್ಯ ನೀಡಲಿ. ಸರ್ಕಾರ ಕೂಡಲೇ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಆರೋಗ್ಯ ಮತ್ತು ಜೀವ ವಿಮೆ, ಹೆಚ್.ಆರ್ ಪಾಲಿಸಿ ಸೇರಿದಂತೆ ಒಟ್ಟು 14 ಬೇಡಿಕೆಗಳನ್ನು ಈಡೇರಿಸಬೇಕು. ಇದರ ಜೊತೆಗೆ ಹೊರ ಗುತ್ತಿಗೆ ರದ್ದುಪಡಿಸಿ ಒಳ ಗುತ್ತಿಗೆ ಆಧಾರದಲ್ಲಿ ಸೇವೆಗೆ ನಿಯೋಜಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಕುಟುಂಬಗಳಿಗೆ 50 ಲಕ್ಷ ರೂ ಪರಿಹಾರ ಮತ್ತು ಅನುಕಂಪದ ಆಧಾರದಲ್ಲಿ ಮೃತಪಟ್ಟ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ನೌಕರಿಯನ್ನು ನ್ಯಾಯಸಮ್ಮತವಾಗಿ ನೀಡಬೇಕು.
ಕೋವಿಡ್ ಆಪತ್ತು ಪ್ರೋತ್ಸಾಹ ಧನವನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಕೋವಿಡ್ ವಾರಿಯರ್ಸ್ಗಳಿಗೂ ವಿಸ್ತರಿಸುವುದರ ಜೊತೆಗೆ ಒಂದು ತಿಂಗಳ ಹೆಚ್ಚುವರಿ ವೇತನ ಜಾರಿಗೊಳಿಸಿ ನೌಕರರ ಆತ್ಮಸ್ಥೈರ್ಯ ಹೆಚ್ಚಿಸಬೇಕು. ಇಲ್ಲವಾದಲ್ಲಿ, ಇಂದಿಗೆ ನಮ್ಮ ಮುಷ್ಕರ 13ನೇ ದಿನಕ್ಕೆ ಕಾಲಿಟ್ಟಿದ್ದು, ಮುಂದೆ ಬೇಡಿಕೆ ಈಡೇರುವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.