ಶಿವಮೊಗ್ಗ: ಐದು ಎಕರೆ ಭೂಮಿ ಹೊಂದಿದವರು ಬಿಪಿಎಲ್ ಕಾರ್ಡ್ ವಾಪಸ್ ನೀಡಬೇಕು ಎಂಬ ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ ನಿಜಕ್ಕೂ ಬಾಲಿಶವಾದದ್ದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಐದು ಎಕರೆ ಭೂಮಿ ಇದ್ದವರ ಸ್ಥಿತಿ ಏನು ಅಂತ ಆಹಾರ ಸಚಿವರಿಗೆ ತಿಳಿದಿಲ್ಲ. ಅವರು ಬಡ ರೈತನ ಕಬ್ಬಿನ ಹಣ ನೀಡದೆ ಟೋಪಿ ಹಾಕಿದ ಹಾಗೆ ಅಂದುಕೊಂಡಿರಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ, ಅದು ಯಡಿಯೂರಪ್ಪ ಕುಟುಂಬದ ಸರ್ಕಾರ ಅಂತ ಅವರ ಪಕ್ಷದವರೇ ಹೇಳ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಕಳೆದ ಒಂದು ವರ್ಷದಿಂದ ಕೊರೊನಾ ಇದ್ದ ಕಾರಣ ವೈದ್ಯರ ಸಲಹೆ ಮೇರೆಗೆ ರಾಜ್ಯ ಪ್ರವಾಸ ಮಾಡಲು ಆಗಲಿಲ್ಲ. ಈಗ ಮತ್ತೆ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತೇನೆ. ನಾನು ಸಿಎಂ ಸ್ಥಾನದಿಂದ ಕೆಳಗೆ ಇಳಿದ ನಂತರ ರಾಜ್ಯದಲ್ಲಿ ಪ್ರವಾಹ ಬಂದು ಬೆಳೆಹಾನಿ ಆಗಿದೆ. ಭಗವಂತನ ದಯೆಯಿಂದ ನಾನು ಸಿಎಂ ಸ್ಥಾನದಲ್ಲಿ ಇರಲಿಲ್ಲ ಎಂದರು.
ಮೈತ್ರಿ ಸರ್ಕಾರ ಪತನವಾದ ಬಳಿಕ ಬಂದ ಸರ್ಕಾರ, ಎರಡು ವರ್ಷದಲ್ಲಿ ಮಾಡಿರುವ ಘೋಷಣೆ, ಜನ ಸಾಮಾನ್ಯರಿಗೆ ಹೇಗೆ ಸ್ಪಂದಿಸಿದ್ದಾರೆ ಎಂಬುದನ್ನು ನೋಡಿದ್ದೇನೆ. ಈ ದೇಶದ ವ್ಯವಸ್ಥೆಯು ಕಾರ್ಪೊರೇಟ್ ಹಾಗೂ ಶ್ರೀಮಂತರಿಗೆ ಅನುಕೂಲವಾಗುವಂಥ ವ್ಯವಸ್ಥೆಯಾಗಿದೆ. 2018 ರಿಂದ ಇದುವರೆಗೂ ಮಳೆಯಿಂದ ಹಾನಿಯಾದವರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಬಜೆಟ್ನಲ್ಲಿ ಘೋಷಣೆ ಮಾಡದೆ ಅಭಿವೃದ್ದಿ ವಿಚಾರಕ್ಕೆ ಹಣ ನೀಡಲಾಗುತ್ತಿದೆ. ಅದರಲ್ಲೂ ಶಿವಮೊಗ್ಗದ ಅಭಿವೃದ್ದಿಗೆ ಹಣ ನೀಡಲಾಗುತ್ತಿದೆ. ಆದರೆ, ಯಾವುದೇ ಅಭಿವೃದ್ದಿ ಕಾಣುತ್ತಿಲ್ಲ. ಹಾಗಾದ್ರೆ ಕಳೆದ ಎರಡು ವರ್ಷದ ಬಜೆಟ್ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದರು.
ಓದಿ: ಇಂಧನ ಬೆಲೆ ಏರಿಕೆಗೆ ಖಂಡನೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ
ಮೀಸಲಾತಿ ವಿಚಾರದಲ್ಲಿ ಸರ್ಕಾರ ತೀರ್ಮಾನ ಮಾಡಬೇಕಿದೆ. ಮೀಸಲಾತಿ ಅವಕಾಶ ಇದೆಯೇ ಅಥವಾ ಇಲ್ಲವಾ ಎನ್ನುವ ವಾಸ್ತವಾಂಶಗಳನ್ನು ಜನರ ಮುಂದಿಡುತ್ತಿಲ್ಲ. ಜಾತಿ ಜಾತಿಗಳ ನಡುವೆ ಸಂಘರ್ಷ ಮಾಡುವುದಕ್ಕೆ ಸರ್ಕಾರ ಹೊರಟಿದೆಯೇ ಎಂಬ ಅನುಮಾನ ಮೂಡಿದೆ. ಮೀಸಲಾತಿ ಕುರಿತು ಒಳ್ಳೆಯ ತೀರ್ಮಾನವಾಗಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದರು.
ಮಂದಿರ ನಿರ್ಮಾಣಕ್ಕೆ ಹಣ ನೀಡದ ಮನೆ ಮಾರ್ಕ್ ಯಾಕೆ?: ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ಕಡೆ ಹಣ ಸಂಗ್ರಹ ಮಾಡಲಾಗುತ್ತಿದೆ. ಆದರೆ ಯಾರು ಮಂದಿರಕ್ಕೆ ಹಣ ನೀಡುತ್ತಿಲ್ಲವೋ ಅಂತವರ ಮನೆಯನ್ನು ಮಾರ್ಕ್ ಮಾಡಲಾಗುತ್ತಿದೆ. ಇದು ಯಾಕೆ ಎಂದು ಪ್ರಶ್ನಿಸಿದರು.
ಮಧು ಬಂಗಾರಪ್ಪ ಕಾಂಗ್ರೆಸ್ಗೆ ಹೋಗ್ತೆನೆ ಎಂದು ಹೇಳಿಲ್ಲ: ಮಧು ಬಂಗಾರಪ್ಪ ಈಗಲೂ ಜೆಡಿಎಸ್ನಲ್ಲಿಯೇ ಇದ್ದಾರೆ. ಅವರು ಕಾಂಗ್ರೆಸ್ ಗೆ ಹೋಗುವ ಕುರಿತು ಎಂದು ಹೇಳಿಲ್ಲ. ಅವರು ಈಗ ನನ್ನ ಸಹೋದರ ಸಮಾನರು ಎಂದರು.