ಶಿವಮೊಗ್ಗ : ಭಾರತ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಶ್ರೀಮಂತ ರಾಷ್ಟ್ರ. ಆಧುನೀಕತೆಯ ಭರಾಟೆಯಲ್ಲಿ ನಮ್ಮ ಕಲೆ ಸಂಸ್ಕೃತಿ ಮರೆಯಾಗುತ್ತಿದ್ದು, ಮಕ್ಕಳು ಸೇರಿದಂತೆ ಯುವಜನತೆ ಹಾದಿ ತಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಲೆನಾಡಿನ ಸರ್ಕಾರಿ ಶಾಲೆಯೊಂದು ಖಾಸಗೀ ಸಂಸ್ಥೆಯೊಂದರ ಸಹಕಾರದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ವಿನೂತನ ಪ್ರಯತ್ನಕ್ಕೆ ಮುಂದಾಗಿ. ಅದರಲ್ಲಿ ಯಶಸ್ವಿ ಕೂಡ ಆಗಿದೆ. ಇನ್ನು ಆ ಶಾಲೆಯ ಪ್ರಯತ್ನ ಸಾರ್ವಜನಿಕರ ಪ್ರಶಂಸೆಗೆ ಕೂಡ ಪಾತ್ರವಾಗಿದೆ.
ಹೆತ್ತ ತಂದೆ-ತಾಯಿಯ ಪಾದಗಳಿಗೆ ಪೂಜೆ ಮಾಡುತ್ತಿರುವ ದೃಶ್ಯ, ಪಾದ ಪೂಜೆ ಮಾಡುತ್ತಿರುವುದಕ್ಕೆ ಸಂತಸಗೊಂಡು ಕಣ್ಣೀರು ಹಾಕುತ್ತಿರೋ ಪೋಷಕರು. ಹೌದು, ಈ ದೃಶ್ಯ ಕಂಡುಬಂದದ್ದು ಶಿವಮೊಗ್ಗ ನಗರದ ಮಿಳ್ಳಗಟ್ಟದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸದಾ ನೂತನ ಪ್ರಯೋಗಗಳನ್ನು ಮಾಡುತ್ತಾ, ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿರುವ ಶಿವಮೊಗ್ಗದ ನಿರಂತರ ಸಂಸ್ಥೆಯು ಗುರುಪೂರ್ಣಿಮೆ ಅಂಗವಾಗಿ ಮಿಳ್ಳಘಟ್ಟದ ಸರ್ಕಾರಿ ಶಾಲೆಯಲ್ಲಿ ತಾಯಂದಿರ ಪಾದಪೂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪ್ರತಿಯೊಬ್ಬ ಮಗುವಿಗೂ ಮನೆಯೇ ಮೊದಲ ಪಾಠಶಾಲೆ. ತಂದೆ-ತಾಯಿಗಳೇ ಮೊದಲ ಗುರುಗಳು ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ಬೇರೂರಲಿ ಎಂಬ ಕಾರಣದಿಂದ ಹಮ್ಮಿಕೊಂಡಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ, ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು. ಹೆತ್ತವರಿಗೆ ಪಾದಪೂಜೆ ಮಾಡುವ ಮೂಲಕ ಮಕ್ಕಳು ಜನ್ಮನೀಡಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಯಾರೂ ಮರೆಯದಿರಲಿ, ಪೋಷಕರೊಂದಿಗಿನ ಮಕ್ಕಳ ಸಂಬಂಧ ಸುಖಕರವಾಗಿರಲಿ. ಹಾಗೆಯೇ ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ನಮ್ಮ ಸಂಪ್ರದಾಯಗಳು ಶಾಶ್ವತವಾಗಿ ಉಳಿಯುವ ಮೂಲಕ ಮುಂದಿನ ಪೀಳಿಗೆಗೆ ಅದು ನೆನಪಿನಲ್ಲಿಡುವಂತಾಗಲಿ ಎಂಬುದು ಕಾರ್ಯಕ್ರಮದ ಆಶಯ.