ಶಿವಮೊಗ್ಗ: ತಾಲೂಕಿನ ಹಾರೊ ಬೆನವಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಗ್ರಾಮದಲ್ಲಿ ಎಲ್ಲಾ ಕೋಮಿನವರು ವಾಸವಾಗಿದ್ದಾರೆ. ಆದರೆ ನಿನ್ನೆ ಒಂದು ಕೋಮಿನವರು ಬಹುಸಂಖ್ಯಾತರ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ವಿಷಯ ತಿಳಿದ ಬಹುಸಂಖ್ಯಾತರು ಒಂದು ಕೋಮಿನ ಯುವಕರಿಗೆ ಈ ರೀತಿ ಮಾಡುವುದು ತಪ್ಪು ಎಂದು ಹೇಳಲು ಹೋದಾಗ ಮಾತಿಗೆ ಮಾತು ಬೆಳೆದು ಘರ್ಷಣೆ ಆಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಹೊಳೆ ಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಪು ಘರ್ಷಣೆಯನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಡಿಎಆರ್ ಹಾಗೂ ಹೊಳೆಹೊನ್ನೂರು ಪೊಲೀಸರು ಮೊಕ್ಕಾಂ ಹೂಡಿದ್ದು, ಸದ್ಯ ಪರಿಸ್ಥಿತಿ ಶಾಂತಯುತವಾಗಿದೆ.
ಘರ್ಷಣೆಗೆ ಕಾರಣವೇನು: ಹಾರೊ ಬೆನವಳ್ಳಿ ಗ್ರಾಮದ ಹಾಳೂರು ಎಂಬಲ್ಲಿ ಗ್ರಾಮದ ಪ್ರತಿಯೊಬ್ಬರಿಗೆ ಸೈಟ್ ನೀಡಲಾಗಿತ್ತು. ಕಾರ್ತಿಕ್ ಎಂಬುವರಿಗೆ ನೀಡಲಾಗಿದ್ದ ಜಾಗದಲ್ಲಿ ಫೈರೋಜ್ ಎಂಬುವರು ಅಡಿಕೆ ತಟ್ಟೆ ತಯಾರಿಕಾ ಘಟಕ ಮಾಡಿಕೊಂಡಿದ್ದರು. ಈ ವಿಚಾರವಾಗಿ ಕಾರ್ತಿಕ್ ತನ್ನ ಸೈಟ್ನ್ನು ಬಿಟ್ಟು ಕೊಡುವಂತೆ ಫೈರೋಜ್ಗೆ ತಿಳಿಸಿದ್ದರು. ಆದರೆ ಫೈರೋಜ್ ತನ್ನ ಸಹೋದರ ಸಂಬಂಧಿಯನ್ನು ಕರೆಯಿಸಿ ಕಾರ್ತಿಕ್ಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ. ವಿಷಯ ತಿಳಿದ ಗ್ರಾಮಸ್ಥರು ಫೈರೋಜ್ ಬಳಿ ಹೋಗಿ ಮಾತುಕತೆ ನಡೆಸುವಾಗ ಗುಂಪು ಸೇರಿಕೊಂಡು ಗಲಾಟೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಶೃಂಗೇರಿಯಲ್ಲಿ ಇಬ್ಬರ ನಡುವೆ ಗಲಾಟೆ: ದೂರು-ಪ್ರತಿ ದೂರು ದಾಖಲು