ಶಿವಮೊಗ್ಗ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಅಂತರ್ಜಲ ಚೇತನ ಯೋಜನೆಗೆ ಮೇ 6ರಂದು ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಯೋಜನೆಯ ವಿವರಗಳನ್ನು ನೀಡಿದರು. ಪ್ರಥಮ ಹಂತದಲ್ಲಿ ಒಟ್ಟು 9 ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಶಿವಮೊಗ್ಗ ಜಿಲ್ಲೆಯಿಂದ ಚಾಲನೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 23 ಕೆರೆಗಳಿದ್ದು, ಅವುಗಳ ಪೈಕಿ 5300 ಕೆರೆಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇವೆ. ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆಯ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಗುರೂಜಿಯವರ ಸಂಸ್ಥೆಯು ತಾಂತ್ರಿಕ ನೆರವು ಹಾಗೂ ಮೇಲುಸ್ತುವಾರಿಯನ್ನು ವಹಿಸಿಕೊಳ್ಳಲಿದೆ ಎಂದರು. ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುವುದು. ಯೋಜನೆಯಡಿ ಜಿಲ್ಲೆಯ 1650 ಗ್ರಾಮಗಳ ವ್ಯಾಪ್ತಿಯಲ್ಲಿ 345 ಕಿರು ಜಲಾನಯನಗಳ ಸುಮಾರು 5 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಈ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 8.82 ಲಕ್ಷ ಜನರಿಗೆ ಸದುಪಯೋಗವಾಗಲಿದೆ ಎಂದು ಈಶ್ವರಪ್ಪ ತಿಳಿಸಿದರು.
ಕಾಮಗಾರಿ ವಿವರ: ಯೋಜನೆಯಡಿ 16,255 ಬೋಲ್ಡರ್ ಚೆಕ್ (ಕಲ್ಲುಗುಂಡು ತಡೆ) ನಿರ್ಮಾಣ, 15,948 ಇಂಗುಬಾವಿ, 307 ಇಂಗು ಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳಿವೆ. ಶಿವಮೊಗ್ಗ ತಾಲೂಕು 4775, ತೀರ್ಥಹಳ್ಳಿ 7351, ಭದ್ರಾವತಿ 3128, ಸೊರಬ 6765, ಶಿಕಾರಿಪುರ 5610, ಹೊಸನಗರ 2165, ಸಾಗರದಲ್ಲಿ 2937 ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. ಮೇ ತಿಂಗಳಲ್ಲಿ 4 ಸಾವಿರ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.
ಏಕಕಾಲದಲ್ಲಿ ಉದ್ಘಾಟನೆ: ಮೇ 6ರಂದು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್‍ಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ತೀರ್ಥಹಳ್ಳಿ ತಾಲೂಕಿನ ಅರಗ, ಭದ್ರಾವತಿ ತಾಲೂಕಿನ ದೊಡ್ಡೇರಿ, ಸೊರಬ ತಾಲೂಕಿನ ಬಾರಂಗಿ, ಶಿಕಾರಿಪುರ ತಾಲೂಕಿನ ತರಳಘಟ್ಟ, ಹೊಸನಗರ ತಾಲೂಕಿನ ಮೇಲಿನ ಬೆಸಿಗೆ, ಸಾಗರ ತಾಲೂಕಿನ ಕೆಳದಿಯಲ್ಲಿ ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜಲಾಮೃತ ಯೋಜನೆ: ಶಿವಮೊಗ್ಗ ನಗರದಲ್ಲಿ 70 ಕೆರೆಗಳಿದ್ದು, ಅವುಗಳ ಪೈಕಿ 25 ಕೆರೆಗಳ ಅಭಿವೃದ್ಧಿಯನ್ನು ಜಲಾಮೃತ ಯೋಜನೆಯಡಿ ಕೈಗೊಳ್ಳಲಾಗುವುದು. ಇದಕ್ಕಾಗಿ ಸಣ್ಣ ನೀರಾವರಿ ಯೋಜನೆಯಡಿ 16 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದರು.