ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿ ಅಂದ್ರೆ ಪಟಾಕಿಗಳದ್ದೇ ಹೆಚ್ಚು ಕಾರುಬಾರು. ಕೊರೊನಾ ಹಿನ್ನೆಲೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹಸಿರು ಪಟಾಕಿ ಸುಡುವುದಕ್ಕೆ ಅನುಮತಿ ನೀಡಿದೆಯಾದರೂ ಅದರಿಂದಾದ ಗೊಂದಲ ಅಷ್ಟಿಷ್ಟಲ್ಲ. ನಗರದಲ್ಲಿ ಈ ಗೊಂದಲ ಸ್ವಲ್ಪ ಹೆಚ್ಚೇ ಇದ್ದು, ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ನಗರದ ನೆಹರು ಕ್ರೀಡಾಂಗಣ, ಸೈನ್ಸ್ ಮೈದಾನ ಸೇರಿದಂತೆ ವಿವಿಧೆಡೆ ಪಟಾಕಿ ಮಳಿಗೆಗಳನ್ನು ಹಾಕಲಾಗಿದ್ದು, ಇಲ್ಲಿ ರಾಜ್ಯ ಸರ್ಕಾರ ತಿಳಿಸಿದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇದು ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಇಂದು ಸ್ಥಳಕ್ಕೆ ಬಂದ ಆರೋಗ್ಯ ವಿಭಾಗದ ಅಧಿಕಾರಿಗಳ ವರ್ಗ ಪರಿಶೀಲನೆ ನಡೆಸಿದ್ದಲ್ಲದೆ ರಾಜ್ಯ ಸರ್ಕಾರ ತಿಳಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಖಡಕ್ ಎಚ್ಚರಿಕೆ ನೀಡಿದೆ. ಈ ವೇಳೆ ಗ್ರೀನ್ ಪಟಾಕಿ ಬಿಟ್ಟು ಮಳಿಗೆಗಳಲ್ಲಿ ಸಾಮಾನ್ಯ ಪಟಾಕಿಗಳು ದೊರೆತಿದ್ದು, ಅಧಿಕಾರಿಗಳು ಅವುಗಳನ್ನು ಸೀಜ್ ಮಾಡುತ್ತಿದ್ದಾಗ ಜಟಾಪಟಿ ಉಂಟಾಗಿದೆ.
ಇದರಿಂದ ಗೊಂದಲಕ್ಕಿಡಾದ ಪಟಾಕಿ ವ್ಯಾಪಾರಿಗಳು, ಸರ್ಕಾರದ ಆದೇಶಕ್ಕೂ ಮುನ್ನವೇ ನಾವು ಹಣ ಹಾಕಿ ಇವುಗಳನ್ನು ತಂದಿದ್ದೇವೆ. ಸರ್ಕಾರದ ಈ ದಿಢೀರ್ ಆದೇಶದಿಂದ ಗ್ರೀನ್ ಪಟಾಕಿ ಎಲ್ಲಿಯೂ ದೊರಕದು. ಗ್ರೀನ್ ಪಟಾಕಿ ತಕ್ಷಣ ಸಿಗದಿರುವುದಕ್ಕೆ ಜನರು ಸಹ ಸಾಮಾನ್ಯ ಪಟಾಕಿಗಳನ್ನೇ ಕೇಳುತ್ತಿದ್ದಾರೆ. ನಮಗೆ ಸಿಕ್ಕ ಪಟಾಕಿಗಳನ್ನು ನಾವು ಮಾರಾಟ ಮಾಡುತ್ತಿದ್ದೇವೆ. ಜನರು ಸಹ ತಮ್ಮಿಷ್ಟದ ಪಟಾಕಿ ಖರೀದಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಪಟಾಕಿ ವ್ಯಾಪಾರಿಗಳು.