ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ತವರು ಕ್ಷೇತ್ರಕ್ಕೆ ಹೊಸ ಕಾರಿನಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪಟ್ಟಣದ ವಿನೋಬ ನಗರದಲ್ಲಿರುವ ನಿವಾಸಕ್ಕೆ ಬಂದ ಯಡಿಯೂರಪ್ಪಗೆ ನೂರಾರು ಜನ ಕಾರ್ಯಕರ್ತರು ಹೂ ಗುಚ್ಛ ನೀಡಿ ಸ್ವಾಗತಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, ಬರುವಂತಹ ದಿನಗಳಲ್ಲಿ 135ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಹಾಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸ್ವತಂತ್ರ ಬಲದಿಂದ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ಗಣೇಶೋತ್ಸವ ಆಚರಣೆ ಕುರಿತು ಚರ್ಚಿಸಿ ನಿರ್ಧಾರ ಪ್ರಕಟ: ಗಣಪತಿ ಹಬ್ಬದ ಆಚರಣೆಯ ಕುರಿತು ಮಾತನಾಡಿ, ಗಣೇಶೋತ್ಸವ ಆಚರಣೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಅಕ್ಕಪಕ್ಕದ ರಾಜ್ಯದಲ್ಲಿ ಕೊರೊನಾ ಹೆಚ್ಚಿರುವ ಕಾರಣ ಹೇಗೆ ಆಚರಿಸಬೇಕು ಎಂಬುದರ ಕುರಿತು ನಮ್ಮ ಮುಖಂಡರು ಚರ್ಚೆ ಮಾಡಿ ತಿರ್ಮಾನ ತೆಗೆದುಕೊಳ್ಳುತ್ತಾರೆ, ಅದಕ್ಕೆ ರಾಜ್ಯದ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅತ್ಯಾಚಾರಿ ಆರೋಪಿಗಳಿಗೆ ತಕ್ಕ ಶಿಕ್ಷೆ : ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿ ಮಾಜಿ ಸಿಎಂ, ಪೊಲೀಸರು ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದಾರೆ. ಇಂದು, ನಾಳೆಯೊಳಗಾಗಿ ಸಂಬಂಧ ಪಟ್ಟ ತಪ್ಪಿತಸ್ಥರನ್ನು ಬಂಧಿಸಿ ಅವರಿಗೆ ಯ್ಯಾವ ರೀತಿ ಶಿಕ್ಷೆಕೊಡಿಸುತ್ತೇವೆ ಎಂದರು. ಇನ್ನೂ ಮುಂದೆ ಹೆಣ್ಣು ಮಕ್ಕಳ ಮೇಲೆ ಕೈ ಹಾಕಲು ಕ್ರೂರಿಗಳು ಹಿಂಜರಿಯಬೇಕು ಎಂದು ಹೇಳಿದರು.
ಗೃಹ ಸಚಿವರು ಉದ್ದೇಶ ಪೂರ್ವಕವಾಗಿ ಆ ಮಾತು ಹೇಳಿಲ್ಲ: ಇನ್ನೂ ಜ್ಞಾನೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಗೃಹ ಸಚಿವರು ಉದ್ದೇಶ ಪೂರ್ವಕವಾಗಿ ಅಂತ ಹೇಳಿಕೆ ನೀಡಿಲ್ಲ. ಅವರೇ ಮುಂದುವರಿಸುವುದು ಬೇಡ ಎಂದಿದ್ದಾರೆ. ಹಾಗಾಗಿ ಮುಂದುವರಿಸುವುದು ಸೂಕ್ತವಲ್ಲ. ಆರಗ ಜ್ಞಾನೇಂದ್ರ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.