ಶಿವಮೊಗ್ಗ: ರಾಜ್ಯ ಸರ್ಕಾರ ಕೊರೊನಾ ತಡೆಯಲು ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕೊರೊನಾ ತಡೆಯಲು ಆರೋಗ್ಯ ಹಸ್ತ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಧೃವನಾರಾಯಣ ಆರೋಪಿಸಿದರು.
ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಇಡೀ ದೇಶವನ್ನು ಬಾಧಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿವೆ. ಸಮರ್ಪಕ ಪ್ರಮಾಣದಲ್ಲಿ ಕೊರೊನಾ ಪರೀಕ್ಷೆ ನಡೆಸುತ್ತಿಲ್ಲ. ಸರ್ಕಾರಕ್ಕೆ ಆಸಕ್ತಿಯೂ ಇಲ್ಲವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿದೆ ಎಂದರು.
ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಪ್ರತಿ ಮನೆ ಮನೆಗೆ ತೆರಳಿ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ತಪಾಸಣೆ ನಡೆಸಿ ಜಾಗೃತಿ ಮೂಡಿಸಲಾಗುತ್ತದೆ. ಈ ದೊಡ್ಡ ಅಭಿಯಾನಕ್ಕಾಗಿ ಸುಮಾರು 15 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ವಾರಿಯರ್ಸ್ ತರಬೇತಿ ಪಡೆದಿದ್ದಾರೆ. ನಮ್ಮ ಪಕ್ಷದ ವೈದ್ಯ ಘಟಕದ ನೂರಾರು ವೈದ್ಯರು ಇದಕ್ಕೆ ಕೈಜೋಡಿಸಿದ್ದಾರೆ ಎಂದರು.
ರಾಜ್ಯಾದ್ಯಂತ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸುಮಾರು 7,800ಕ್ಕೂ ಅಧಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕೊರೊನಾ ವಾರಿಯರ್ಸ್‍ಗಳು ಪ್ರತಿ ಮನೆಗೂ ತೆರಳಿ ತಪಾಸಣೆ ನಡೆಸಲಿದ್ದಾರೆ ಎಂದರು. ಈಗಾಗಲೇ ಪ್ರತಿ ಗ್ರಾಮ ಪಂಚಾಯಿತಿಗೆ ತಪಾಸಣಾ ಕಿಟ್ ನೀಡಲಾಗಿದೆ. ವ್ಯಕ್ತಿಯ ದೇಹದ ಉಷ್ಣತೆ, ಆಮ್ಲಜನಕದ ಪ್ರಮಾಣ ಸೇರಿದಂತೆ ಇತರೆ ಪ್ರಾಥಮಿಕ ತಪಾಸಣೆ ನಡೆಸಲಾಗುವುದು. ಅನಾರೋಗ್ಯದ ಲಕ್ಷಣ ಕಂಡು ಬಂದರೆ ಅಂತಹವರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ತಿಳಿಸಲಾಗುವುದು ಎಂದರು.
ಇದು ಒಂದು ರೀತಿಯಲ್ಲಿ ಪಲ್ಸ್ ಪೊಲೀಯೋ ಮಾದರಿ ಕಾರ್ಯಕ್ರಮವಾಗಿದೆ. ರಾಜ್ಯದ ಸುಮಾರು 6.5 ಕೋಟಿ ಜನರನ್ನು ಪರೀಕ್ಷೆ ಮಾಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಪಕ್ಷಕ್ಕೆ ಸುಮಾರು 6 ಕೋಟಿ ರೂಪಾಯಿಗಳ ವೆಚ್ಚ ತಗಲುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಪಕ್ಷದ ಸ್ಥಳೀಯ ಸಂಸದರು, ಶಾಸಕರು, ಕಾಂಗ್ರೆಸ್ ಪಕ್ಷದ ಹಿತೈಷಿಗಳು ನೀಡಿರುವ ದೇಣಿಗೆಯನ್ನು ಇದಕ್ಕೆ ಬಳಸಿಕೊಳ್ಳಲಾಗುವುದು ಎಂದರು.
ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಬಹುಕೋಟಿ ಭ್ರಷ್ಟಾಚಾರ ಎಸಗಿ, ನಿರ್ವಹಣೆಯಲ್ಲಿ ವಿಫಲವಾಗಿದೆ. ಆರೋಗ್ಯ ಮಂತ್ರಿ ಯಾರು ಎಂಬುದೇ ಗೊತ್ತಿಲ್ಲ. ಶ್ರೀರಾಮುಲು ಹೆಸರಿಗಷ್ಟೇ ಮಂತ್ರಿಯಾಗಿದ್ದಾರೆ. ಕೊರೊನಾ ಸರಪಳಿ ತುಂಡು ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಸಮಿತಿಯ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಯೋಗಿಶ್ ಇದ್ದರು.