ಶಿವಮೊಗ್ಗ: ಇತ್ತಿಚೀನ ಬೆಳವಣಿಗೆ ನೋಡಿದರೆ, ರಾಜ್ಯ ಸರ್ಕಾರವೇ ಅಸ್ಥಿತ್ವದಲ್ಲಿ ಇಲ್ಲವೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾವುದೇ ಮಂತ್ರಿಗಳ ಮೇಲೆ ಮುಖ್ಯಮಂತ್ರಿಗಳಿಗೆ ಹಿಡಿತ ಇಲ್ಲದಂತೆ ಆಗಿದೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಅವರು ಸಿಲುಕಿಕೊಂಡಿದ್ದರೂ ಸಹ ಮುಖ್ಯಮಂತ್ರಿಗಳು ಜಾರಕಿಹೊಳಿ ನಿರ್ದೋಷಿಯಾಗಿ ಬರುತ್ತಾರೆ ಅಂತ ಹೇಳುತ್ತಿರುವುದು ನೋಡಿದ್ರೆ, ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಲು ಹೊರಟಂತಿದೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಆರೋಪಿಗಳ ಪರವಾಗಿ ಮಾತನಾಡುತ್ತಾರೆ ಅಂದ್ರೆ, ಇದು ದುರಂತದ ಕಥೆ. ಯಡಿಯೂರಪ್ಪನವರು ಸಹ ಜೈಲಿಗೆ ಹೋಗಿ ಬಂದಿರುವ ಕಾರಣ ರಮೇಶ್ ಪರ ಮಾತನಾಡುತ್ತಿದ್ದಾರೆ. ಸಿಎಂ ಆದವರು ಆರೋಪಿಯನ್ನು ಎಸ್ಐಟಿ ಮೂಲಕ ರಕ್ಷಿಸಿ, ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಜಾರಕಿಹೊಳಿ ಎಸ್ಐಟಿಯ ವಿಚಾರಣೆಗೆ ಬಾರದೆ ಹೋದಾಗಲೇ ಹೇಳಿದ್ದೆ, ಅವರು ಕೊರೊನಾ ಸೋಂಕು ಇದೆ ಎಂದು ಆಸ್ಪತ್ರೆಗೆ ದಾಖಲು ಆಗುತ್ತಾರೆ ಎಂದು. ಆ ನಂತರ ಬಿ.ಪಿ. ಶುಗರ್ ಅಂಥ ಆಸ್ಪತ್ರೆಯಲ್ಲೇ ಉಳಿದು ಕೊಳ್ಳುತ್ತಾರೆ. ಉಪಚುನಾವಣೆಯ ವೇಳೆ ಬಂಧಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುವುದು ಖಂಡನೀಯ ಎಂದರು.
ಇವತ್ತು ಸರ್ಕಾರ ರಚನೆಗೆ ಕಾರಣ ಆದವರನ್ನು ಉಳಿಸದೆ ಹೋದರೆ, ಸರ್ಕಾರ ಉರುಳಬಹುದು ಎಂಬ ಪ್ರಶ್ನೆ ಉದ್ಭವಿಸಿದೆ. ಎಸ್ಐಟಿ ಮೂಲಕ ಜಾರಕಿಹೊಳಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸರ್ಕಾರ ಜನ ಪ್ರತಿಭಟನೆ ನಡೆಸದಂತೆ ಕೊರೊನಾವನ್ನು ಅಡ್ಡ ತರುತ್ತಿದ್ದಾರೆ. ಕೊರೊನಾ ಕಡಿವಾಣ ಹಾಕದೆ, ಜನರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಇದ್ದಾಗ ಅದನ್ನು ತಡೆಯಬಹುದಾಗಿತ್ತು. ಇದರಿಂದ ಜನ ಸಾಮಾನ್ಯ ಸಂಕಷ್ಟಕ್ಕಿಡಾಗುತ್ತಾರೆ ಎಂದರು.