ಶಿವಮೊಗ್ಗ : ಕನ್ನಡಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರೋಹಿತ್ ಚಕ್ರತೀರ್ಥರು ತೀರ್ಥಹಳ್ಳಿ ಪಟ್ಟಣಕ್ಕೆ ಆಗಮಿಸಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಎಂಬ ದೊಡ್ಡ ಅಭಿಯಾನ ಪ್ರಾರಂಭಿಸಲಾಗಿದೆ.
ಇಂದು ತೀರ್ಥಹಳ್ಳಿಯ ಕುಡಗೋಲು ವಿಚಾರ ಮಂಥನ ವೇದಿಕೆ ವತಿಯಿಂದ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸಂಜೆ 5:30 ಕ್ಕೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕುವೆಂಪು ಅವರು ರಚಿಸಿದ ನಾಡಗೀತೆಗೆ ಅಪಮಾನ ಮಾಡಿದ ವಿಚಾರ ಬಹಳ ಚರ್ಚೆಗೆ ಬಂದಿತ್ತು. ನಾಡಗೀತೆಗೆ ಅಪಮಾನ ಮಾಡಿದವರು ಕುವೆಂಪು ನೆಲಕ್ಕೆ ಕಾಲಿಡುವುದು ಬೇಡ ಎಂದು ತೀರ್ಥಹಳ್ಳಿಯ ಪ್ರಗತಿ ಪರರು, ಹೋರಾಟಗಾರರು ಹಾಗೂ ಕಾಂಗ್ರೆಸ್ ಪಕ್ಷದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಭಾಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ರೋಹಿತ್ ಚಕ್ರತೀರ್ಥ ಎಂದು ಅಭಿಯಾನವನ್ನು ಸಹ ಪ್ರಾರಂಭ ಮಾಡಿದ್ದಾರೆ.
ಇದನ್ನೂ ಓದಿ: ಕುವೆಂಪು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಜೆಡಿಎಸ್ ಪ್ರತಿಭಟನೆ
ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಆಗಮಿಸುವುದನ್ನು ಕಾರ್ಯಕ್ರಮ ಆಯೋಜಕರು ತಡೆಯಬೇಕು. ಒಂದು ವೇಳೆ ಬಂದರೆ ನಾವು ಪ್ರತಿಭಟನೆ ನಡೆಸಿ, ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಸಮಾಜಿಕ ಜಾಲತಾಣದಲ್ಲಿ ಹಾಜಕಲಾದ ಪೋಸ್ಟ್ನಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮ ಹಿನ್ನೆಲೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದೆ.
ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ದೂರು
ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ : ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ, ಇತಿಹಾಸವನ್ನು ತಿರುಚಿ ಲಿಂಗಾಯತ ಧರ್ಮಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾಮಾನವತಾವಾದಿ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ. ಅವರು ಬಸವಣ್ಣ, ಅಂಬೇಡ್ಕರ್, ಆರ್ಯ ಸಮಾಜ, ಬ್ರಹ್ಮ ಸಮಾಜ, ಸತ್ಯಶೋಧಕ ಸಮಾಜ, ನಾರಾಯಣ ಗುರು ಚಳುವಳಿ ಹಾಗೂ ಥಿಯೋ ಸೋಫಿಕಲ್ ಸೊಸೈಟಿ ಇವುಗಳ ಬಗೆಗಿನ ಅಧ್ಯಯನವನ್ನು ಕೈಬಿಟ್ಟಿದ್ದಾರೆ. ಕುವೆಂಪು ಅವರ ನಾಡಗೀತೆ ತಿರುಚಿರುವ ಹಾಗೂ ರಾಷ್ಟ್ರ ಧ್ವಜದ ಬಣ್ಣಗಳನ್ನು ಒಳ ಉಡುಪಿಗೆ ಹೋಲಿಸಿರುವ ರೋಹಿತ್ ಚಕ್ರತೀರ್ಥ ಯಾವುದೇ ಕಾರಣಕ್ಕೂ ಕುಪೆಂಪು ಅವರ 118 ನೇ ಜನ್ಮದಿನೋತ್ಸವಕ್ಕೆ ಬರಬಾರದು ಎಂದು ಪ್ರಗತಿಪರ ಚಿಂತಕ ದೇವರಾಜ್ ನೆಂಪೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪುಗಾದ ಅವಮಾನ ಖಂಡಿಸಿ ನಡೆಸುವ ಪಾದಯಾತ್ರೆ ಕೈಬಿಡಲ್ಲ: ಕಿಮ್ಮನೆ ರತ್ನಾಕರ್