ಶಿವಮೊಗ್ಗ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜಿಲ್ಲಾ ವಿಶೇಷ (ಪೋಕ್ಸೊ) ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 35 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಶಿಕಾರಿಪುರ ತಾಲೂಕಿನ ತಾಂಡಾವೊಂದರ ಯುವರಾಜ ನಾಯ್ಕ ಶಿಕ್ಷೆಗೆ ಒಳಗಾದ ಆರೋಪಿ. ಯುವರಾಜ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ. ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಗರ್ಭವತಿಯಾದಾಗ ವಿಷಯ ತಿಳಿದು ದೂರು ದಾಖಲಾಗಿತ್ತು.
ಗರ್ಭವತಿಯಾದ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಯುವರಾಜನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಮೂರ್ತಿ ಕೆ.ಬಿ.ಪ್ರಸಾದ್ ಅವರು ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ. ಸರ್ಕಾರಿ ವಕೀಲ ಎಸ್.ಕೆ.ಮೂರ್ತಿ ರಾವ್ ವಾದ ಮಂಡಿಸಿದ್ದರು.