ಶಿವಮೊಗ್ಗ : ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಚ್ಚಿದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ (7) ಮೃತ ಬಾಲಕಿ. ಈಕೆ ದೊಡ್ಡೇರಿಯ ಹಿರಿಯಪ್ಪ ಹಾಗೂ ಮಮತಾ ದಂಪತಿಯ ಪುತ್ರಿ.
ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕಿಗೆ ಹಾವು ಕಡಿದಿದೆ. ತಕ್ಷಣ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಸಾಗರದ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಕೆಳದಿ ರಸ್ತೆಯ ಅಬ್ಬಾಸ್ ಅವರಲ್ಲಿ ನಾಟಿ ಔಷಧಿ ದೊರೆಯುವ ವಿಳಾಸ ಕೇಳಿದ್ದಾರೆ.
ಬಾಲಕಿ ಅಸ್ವಸ್ಥಗೊಂಡಿದ್ದನ್ನು ನೋಡಿದ ಅಬ್ಬಾಸ್ ತಮ್ಮ ಬೈಕ್ನಲ್ಲಿ ಬಾಲಕಿಯನ್ನು ಕುಳ್ಳಿರಿಸಿ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ, ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.
ಜೀವ ಉಳಿಸಲು ನನ್ನ ಬೈಕ್ನಲ್ಲಿ ಬಾಲಕಿಯನ್ನು ಕೂರಿಸಿ ತುಂಬಾ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದೆ. ಆದರೆ, ಬಾಲಕಿ ಬದುಕುಳಿಯಲಿಲ್ಲ ಎಂದು ಅಬ್ಬಾಸ್ ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.