ಶಿವಮೊಗ್ಗ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಅವರ ಅಂತ್ಯ ಸಂಸ್ಕಾರ ಇಂದು ತೀರ್ಥಹಳ್ಳಿಯ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. ಪ್ರತಿಮಾ ಅವರನ್ನು ನಿನ್ನೆ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ತೀರ್ಥಹಳ್ಳಿ ತಾಲೂಕಿನ ತುಡುಕಿ ಗ್ರಾಮದ ಪತಿ ಚಂದ್ರಶೇಖರ್ ಅವರ ಮನೆಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಪೂಜೆ ನಡೆಸಲಾಯಿತು. ನಂತರ ತೀರ್ಥಹಳ್ಳಿಯ ಕುರುವಳ್ಳಿಯ ಹಿಂದೂ ರುದ್ರ ಭೂಮಿಯಲ್ಲಿ ಪ್ರತಿಮಾ ಅವರ ಪಾರ್ಥಿವ ಶರೀರಕ್ಕೆ ಪುತ್ರ ಪಾರ್ಥ ಅಗ್ನಿ ಸ್ಪರ್ಶ ಮಾಡಿದರು.
ಪ್ರತಿಮಾ ಅವರು ಕಳೆದ 15 ದಿನಗಳ ಹಿಂದೆ ನೂತನ ಮನೆಯ ಗೃಹ ಪ್ರವೇಶ ಮಾಡಿದ್ದರು. ಅದೇ ಮನೆಯಲ್ಲಿ ಇಂದು ಅವರ ಮೃತ ದೇಹಕ್ಕೆ ಪೂಜೆ ಸಲ್ಲಿಸಿ ರುದ್ರಭೂಮಿಗೆ ತೆಗೆದುಕೊಂಡು ಹೋಗಲಾಯಿತು. ಪ್ರತಿಮಾ ಹಾಗೂ ಅವರ ಪತಿ ಚಂದ್ರಶೇಖರ್ ಅನ್ಯೋನ್ಯವಾಗಿದ್ದರು.
ಪ್ರತಿಮಾ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ದಕ್ಷ ಅಧಿಕಾರಿ ಹಾಗೂ ಪ್ರತಿಭಾವಂತ ಹೆಣ್ಣು ಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರತಿಮಾ ಅಂತ್ಯಸಂಸ್ಕಾರದಲ್ಲಿ ಬಂಧು- ಬಳಗದವರು, ಗ್ರಾಮಸ್ಥರು ಸೇರಿ ನೂರಾರು ಜನ ಭಾಗಿಯಾಗಿದ್ದರು.
ಮಾಜಿ ಕಾರು ಚಾಲಕನನ್ನ ಬಂಧಿಸಿದ ಪೊಲೀಸರು : ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೆ. ಎಸ್ (45) ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಅವರ ಕಾರು ಚಾಲಕನಾಗಿ ಕಿರಣ್ ಅವರು ಕೆಲಸ ಮಾಡುತ್ತಿದ್ದರು. ಕಿರಣ್ ತಂದೆ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು.
ಆರೋಪಿ ಕಿರಣ್ ಹಾಗೂ ಪ್ರತಿಮಾ ನಡುವೆ ಇತ್ತೀಚೆಗೆ ಕೆಲ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವುಂಟಾಗಿತ್ತು. ಹೀಗಾಗಿ ಕೆಲ ದಿನಗಳ ಹಿಂದಷ್ಟೇ ಕಿರಣ್ ಎಂಬಾತನನ್ನ ಚಾಲಕನ ಕೆಲಸದಿಂದ ಪ್ರತಿಮಾ ತೆಗೆದು ಹಾಕಿದ್ದರು ಎಂಬುದಾಗಿ ತಿಳಿದು ಬಂದಿತ್ತು. ಮರಳಿ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಶನಿವಾರ ರಾತ್ರಿ ಪ್ರತಿಮಾ ಮನೆಗೆ ಕಿರಣ್ ಬಂದಿದ್ದ. ಈ ಸಂದರ್ಭದಲ್ಲೇ ಆತ ಕೊಲೆ ಮಾಡಿ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದರು. ಇದೇ ಅನುಮಾನದ ಮೇರೆಗೆ ಚಾಮರಾಜನಗರ ಬಳಿ ತೆರಳುತ್ತಿದ್ದ ಕಿರಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಬಂಧಿತ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕ ಪೊಲೀಸ್ ವಶಕ್ಕೆ