ಶಿವಮೊಗ್ಗ :ಇಂದಿನಿಂದ ಮೇ 1 ವರವರೆಗೆ ಒಂದು ತಿಂಗಳ ಕಾಲ ಆಗುಂಬೆ ಮಾರ್ಗವಾಗಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಎ ದಯಾನಂದ ತಿಳಿಸಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸುರಿದಿದ್ದ ಮಳೆಯಿಂದ ಆಗುಂಬೆ ಘಾಟಿನ ಸೂರ್ಯಾಸ್ತ ವೀಕ್ಷಣಾ ಗೋಪುರದ ಬಳಿಯ ರಸ್ತೆ ಕುಸಿದು ಬಿದ್ದಿತ್ತು. ಅದರ ಮುಂದಿನ ತಿರುವಿನಲ್ಲೂ ಸಹ ಮಣ್ಣು ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ಆಗ ತಕ್ಷಣಕ್ಕೆ ಬೇಕಾದ ತಾತ್ಕಾಲಿಕ ಪರಿಹಾರ ಕಾಮಗಾರಿ ನಡೆಸಲಾಗಿತ್ತು.
ಸಧ್ಯೆ ಮಣ್ಣು ಕುಸಿತವಾದ ಕಡೆ ದುರಸ್ತಿ ಮಾಡದೆಹೋದ್ರೆ ಮುಂದಿನ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಮಣ್ಣು ಕುಸಿದಿದ್ದ ಕಡೆ ದುರಸ್ತಿ ಸಲುವಾಗಿ ಆಗುಂಬೆ ಘಾಟ್ ಬಂದ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಸ್ತೆ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಲಿದೆ. ಎಪ್ರಿಲ್ 1 ರಿಂದ ಏಪ್ರಿಲ್ 31 ರ ತನಕ ರಸ್ತೆ ಬಂದ್ ಇದ್ದು ಮೇ 1 ರಂದು ರಸ್ತೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ. ಈ ಹಿಂದೆ 2 ಬಾರಿ ರಸ್ತೆ ಕಾಮಗಾರಿಯನ್ನ ಮುಂದೂಡಲಾಗಿತ್ತು. ಮೊದಲು ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆ ಇರುವುದರಿಂದ ಮುಂದೂಡಿದರೆ ಮತ್ತೂಮ್ಮೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾಮಗಾರಿ ನಡೆಸಲು ಅನುಮತಿ ಪಡೆಯಬೇಕಿತ್ತು ಎಂದು ತಕರಾರು ತೆಗೆದಿದ್ದರು. ಹೀಗಾಗಿ ಮತ್ತೆ ಕಾಮಗಾರಿಯನ್ನು ಮುಂದೂಡಲಾಗಿತ್ತು. ಈಗ ಅರಣ್ಯ ಇಲಾಖೆ ಅನುಮತಿ ನೀಡಿರುವುದರಿಂದ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪರ್ಯಾಯ ಮಾರ್ಗಗಳ ವಿವರ
ಆಗುಂಬೆ ಘಾಟಿಯಲ್ಲಿ ರಸ್ತೆ ಸಂಚಾರ ಬಂದ್ ಆದ ಕಾರಣ, ಸಾಮಾನ್ಯ ಲಘು ವಾಹನಗಳು ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಮಾಳಘಾಟ್, ಕಾರ್ಕಾಳದ ಮೂಲಕ ಉಡುಪಿಗೆ ತೆರಳಬಹುದಾಗಿದೆ. ಇನ್ನು ಭಾರಿ ವಾಹನಗಳು ತೀರ್ಥಹಳ್ಳಿ, ಮಾಸ್ತಿಕಟ್ಟೆ, ಹೊಸಂಗಡಿ, ಕುಂದಾಪುರ ಮಾರ್ಗವಾಗಿ ಉಡುಪಿ ಜಿಲ್ಲೆ ತಲುಪಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ವಿವರಿಸಿದರು.